Site icon Vistara News

ಚಿನ್ನದ ಚೆಂಬು ತುಂಬಿ ತುಳುಕಿತಲೇ ಪರಾಕ್; ಗೊರವಯ್ಯ ನುಡಿದ ಕಾರ್ಣಿಕ ವಾಣಿಯ ಅರ್ಥವೇನು?

goravayya

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ಪಟ್ಟಣ ಹೊರವಲಯದಲ್ಲಿರುವ ಡೆಂಕಣಮರಡಿಯಲ್ಲಿ ಫೆ.26ರಂದು ನಡೆಯುವ ಮೈಲಾರಲಿಂಗೇಶ್ವರ ಜಾತ್ರೆ ಮತ್ತು ಕಾರ್ಣಿಕೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇದಕ್ಕೂ ಮುನ್ನಾ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ದೇವರ ಮೂರ್ತಿ ಮೆರವಣಿಗೆ ವೇಳೆ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಮೈಲಾರ ಲಿಂಗೇಶ್ವರ ದೇಗುಲದ ಆವರಣದಲ್ಲಿ “ಚಿನ್ನದ ಚೆಂಬು ತುಂಬಿ ತುಳುಕಿತಲೇ ಪರಾಕ್” ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗಿ ರೈತಾಪಿ ವರ್ಗ ಸಮೃದ್ಧವಾಗಿರುತ್ತಾರೆ. ರಾಜಕಾರಣಿಗಳ ಬೊಕ್ಕಸ ತುಂಬುತ್ತೆ ಎನ್ನುವುದು ಕಾರ್ಣಿಕ ವಾಣಿಯ ಸಾರಾಂಶವಾಗಿದೆ.

ನಾಳೆ (ಫೆ.26) ಡೆಂಕಣಮರಡಿಯಲ್ಲಿ ನಡೆಯುವ ಕಾರ್ಣಿಕೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಗೊರವಯ್ಯ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ನುಡಿಯಲಿದ್ದಾರೆ. ಮುಂದಿನ ವರ್ಷದ ಭವಿಷ್ಯ ದೃಷ್ಟಿಯಿಂದ ಕಾರ್ಣಿಕ ವಾಣಿ ಅತ್ಯಂತ ಮಹತ್ವದ್ದಾಗಿದೆ.

ದ್ವಾಪರ ಯುಗದಲ್ಲಿ ಮಣಿಕಾಸುರ, ಮಲ್ಲಾಸುರರೆಂಬ ರಾಕ್ಷಸರು ಇದ್ದರು. ಋಷಿಮುನಿಗಳಿಗೆ ನಾನಾ ವಿಧದ ಹಿಂಸೆ, ಕಿರುಕುಳ ಕೊಡುತ್ತಿದ್ದರು. ಹೀಗಾಗಿ ನೊಂದ ಋಷಿ ಮುನಿಗಳು ಶಿವನ ಬಳಿಗೆ ತೆರಳಿ ದೂರು ಸಲ್ಲಿಸಿದ್ದರಂತೆ. ಋಷಿಗಳ ಮನವಿಗೆ ಶಿವ ಸ್ಪಂದಿಸಿ, ರಾಕ್ಷಸರ ಸಂಹಾರಕ್ಕಾಗಿ ಮೈಲಾರ ಲಿಂಗೇಶ್ವರನಾಗಿ ಜನ್ಮ ತಾಳಿದ್ದರು. ಪಾರ್ವತಿ ಗಂಗಿಮಾಳಮ್ಮನ ರೂಪತಾಳಿ ಭೂಮಿಗೆ ಬಂದಿದ್ದರು. ಮೈಲಾರದ ಡೆಂಕಣ ಮರಡಿಯಲ್ಲಿ ರಕ್ಕಸರನ್ನು ಸಂಹರಿಸಿದರು ಅನ್ನೋ ಪ್ರತೀತಿ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಇದನ್ನೂ ಓದಿ | Karnataka Weather : ಅಬ್ಬಾ.. ಏನ್‌ ಬಿಸಿಲಪ್ಪ; ಶುರುವಾಯ್ತು ಜನರ ಗೊಣಗಾಟ

ಭರತ ಹುಣ್ಣಿಮೆಯಂದು ಮೈಲಾರಲಿಂಗೇಶ್ವರ ನುಡಿಯುವ ಕಾರ್ಣಿಕ ಭಕ್ತರಿಗೆ ಮಹತ್ವದ್ದಾಗಿದೆ. ದುಷ್ಟ ಸಂಹಾರ, ಶಿಷ್ಟರ ರಕ್ಷಣೆಗೆ ಮಾರ್ತಾಂಡ ಭೈರವನ ರೂಪದಲ್ಲಿ ಧರೆಗೆ ಭಗವಂತ ಬರುತ್ತಾನೆ. ಭಕ್ತರ ಉದ್ಧಾರ, ರಾಜಕೀಯ ಏಳುಬೀಳು ಬಗ್ಗೆ ಕಾರ್ಣಿಕ ನುಡಿಯಲಾಗುತ್ತದೆ. ಪ್ರಕೃತಿಯಲ್ಲಾಗುವ ಬದಲಾವಣೆ ಕುರಿತು ದೇವವಾಣಿ ನುಡಿಯಲಾಗುತ್ತೆ ಎಂಬ ನಂಬಿಕೆ ಇದೆ.

Exit mobile version