ಬೆಂಗಳೂರು: ರಾಜ್ಯ ಸರ್ಕಾರವು ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಸೇರಿ ಹಲವು ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಉತ್ತೇಜನ ನೀಡುತ್ತಿದೆ. ಉದ್ಯಮಶೀಲ ಮಹಿಳೆಯರು ಬೆಂಗಳೂರಿನ ಆಚೆಗೂ ಉದ್ಯಮಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಕರೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮಟ್ಟದ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಅವರು ಮಾತನಾಡಿ, ರಾಜ್ಯದ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿ ಮೂಲಕ ಉದ್ಯಮಿಗಳಿಗೆ ಹಂಚುತ್ತಿರುವ ನಿವೇಶನದಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ.5ರಷ್ಟು ಮೀಸಲಾತಿ ಇದೆ. ಜತೆಗೆ ಕೆಎಸ್‌ಐಐಡಿಸಿಯಲ್ಲೂ ಜಮೀನು ಹಂಚಿಕೆಯಲ್ಲಿ ಇದೇ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಹೂಡಿಕೆ ಸಬ್ಸಿಡಿಯಾಗಿ ಶೇ.5ರಷ್ಟು ಹೆಚ್ಚುವರಿ ಪ್ರೋತ್ಸಾಹ ಮತ್ತು ವಿದ್ಯುತ್ ಬಿಲ್ ಮೇಲೆ ಗರಿಷ್ಠ ನಾಲ್ಕು ವರ್ಷಗಳ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯವು ಮಹಿಳೆಯರನ್ನು ಕೈಗಾರಿಕಾ ರಂಗದಲ್ಲಿ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದೆ. ತಂತ್ರಜ್ಞಾನ ಪರಿಪೋಷಣಾ ಕೇಂದ್ರ, ತಂತ್ರಜ್ಞಾನ ಅಳವಡಿಕೆ ಇವುಗಳಲ್ಲೂ ಅರ್ಧದಷ್ಟು ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಳೆನೀರು ಸಂಗ್ರಹಣೆ, ತ್ಯಾಜ್ಯ ನೀರು ಮರುಬಳಕೆ, ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗಳಿಗೂ ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಮಹಿಳೆಯರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದರೆ, ಕೆಎಸ್‌ಎಫ್‌ಸಿ ಮೂಲಕ ಗರಿಷ್ಠ 2 ಕೋಟಿ ರೂ.ವರೆಗೂ ಶೇ. 14ರಷ್ಟು ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಕೊಡಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತಿ ಇರುವ ಮಹಿಳೆಯರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಸಾಲಕ್ಕೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಐದು ವರ್ಷಗಳವರೆಗೆ ಶೇ.10ರಷ್ಟು ಬಡ್ಡಿಯನ್ನು ತಾನೇ ಪಾವತಿಸುತ್ತದೆ ಎಂದು ಸಚಿವರು ನುಡಿದರು.
ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರವು ಒತ್ತು ಕೊಟ್ಟಿದೆ. ಜತೆಗೆ, ಕೌಶಲ್ಯಾಭಿವೃದ್ಧಿಗೂ ಗಮನ ಹರಿಸಲಾಗಿದೆ. ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಹಲವು ಸಾಮಾಜಿಕ ಆಶಯಗಳನ್ನೂ ನನಸು ಮಾಡಿಕೊಳ್ಳುವುದು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ | ಅಮೆಜಾನ್‌ನ ಅಲೆಕ್ಸಾ ಯುನಿಟ್‌ನ ನೂರಾರು ಉದ್ಯೋಗ ಕಡಿತ! ಕಾರಣ ಆರ್ಥಿಕ ಹಿಂಜರಿತವಲ್ಲ
ಕಾರ್ಯಕ್ರಮದಲ್ಲಿ ಕೆ.ರತ್ನಪ್ರಭಾ, ಉದ್ಯಮಿಗಳಾದ ಉಮಾ ರೆಡ್ಡಿ, ರಾಜಲಕ್ಷ್ಮಿ, ಲತಾ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ