Site icon Vistara News

Basavaraja Bommai : ರಾಜ್ಯದಲ್ಲಿ 4.7 ಲಕ್ಷ ಹಕ್ಕುಪತ್ರ ವಿತರಣೆ, ಬಡವರ ಕನಸು ನನಸೇ ಗುರಿ ಎಂದ ಬೊಮ್ಮಾಯಿ

Basavaraja Bommai Hakkupatra

#image_title

ಬೆಂಗಳೂರು: ರಾಜ್ಯದಲ್ಲಿ 4.7 ಲಕ್ಷ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಬಡವರ ಕನಸುಗಳನ್ನು ನನಸು ಮಾಡುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು. ಅವರು ಸೋಮವಾರ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 94 ಸಿ ಮತ್ತು 94 ಸಿಸಿಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ʻʻಗ್ರಾಮೀಣ ಪ್ರದೇಶಗಳಲ್ಲಿ 1,54,000 ಹಕ್ಕುಪತ್ರಗಳನ್ನು ನೀಡಲಾಗಿದೆ. 1,50,000 ಕ್ಕಿಂತ ಹೆಚ್ಚು ಹಕ್ಕುಪತ್ರಗಳನ್ನು ಲಂಬಾಣಿ ತಾಂಡಾ, ಕುರುಬರ ಹಟ್ಟಿ, ಗೊಲ್ಲರ ಹಟ್ಟಿಯವರಿಗೆ ನೀಡಲಾಗಿದ್ದು, ಒಟ್ಟು 3 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ. ನಗರಗಳಲ್ಲಿ 90 ಸಿಸಿ ಅಡಿಯಲ್ಲಿ 1 72000 ಜನರಿಗೆ ಹಕ್ಕುಪತ್ರಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. 40000 ಕ್ಕೂ ಹೆಚ್ಚು ಕಾಫಿ ಪ್ಲಾಂಟರುಗಳಿಗೆ ಭೂಮಿಯನ್ನು ಗುತ್ತಿಗೆ ಮೇಲೆ ನೀಡಲಾಗಿದೆ, 60 ಸಾವಿರಕ್ಕೂ ಹೆಚ್ಚು ಎಕರೆ ರೈತರಿಗೆ ನೀಡಿದೆ. 1 ಲಕ್ಷ ಎಕರೆ ಡೀಮ್ಡ್ ಅರಣ್ಯವನ್ನು ಉಳುಮೆ ಮಾಡುವ ರೈತರಿಗೆ ನೀಡಲಾಗಿದೆʼʼ ಎಂದು ಹೇಳಿದರು ಬೊಮ್ಮಾಯಿ.

ಬೆಂಗಳೂರು ನಗರದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು.

ಬಡವರ ಪರವಾಗಿ ಐತಿಹಾಸಿಕ ಕ್ರಮ

ʻʻಬಡವರ ಪರವಾಗಿ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಮನುಷ್ಯ ಗೌರವಯುತ, ಸ್ವಾವಲಂಬಿ, ಸ್ವಾಭಿಮಾನಿ ಬದುಕು ಬದುಕಲು ತಲೆ ಮೇಲೆ ಸೂರು ಅಗತ್ಯ. ಸೂರು ಬೇಕಾದರೆ ಜಮೀನು ಅಗತ್ಯ. ಜಮೀನಿಲ್ಲದೇ ಮನೆ ಕಟ್ಟಿದಾಗ ಸದಾ ಇರುವ ಆತಂಕಕ್ಕೆ ಶಾಶ್ವತ ನೆಮ್ಮದಿ ತರಲು 90 ಸಿ ಕಾನೂನಿನಡಿ ಹಕ್ಕುಪತ್ರ ನೀಡುವ ಮಹತ್ವದ ಕಾರ್ಯಕ್ರಮ ಇದು ಎಂದರು. ಈ ಹಿಂದೆ ಯಾರೂ ಈ ದಿಟ್ಟ ಕ್ರಮ ಕೈಗೊಳ್ಳಲು ಮುಂದೆ ಬಂದಿರಲಿಲ್ಲ. ಕಾನೂನಿನ ತೊಡಕನ್ನು ಹೇಳುತ್ತಿದ್ದರು. ಬಡವರ ಬಗ್ಗೆ ಕಳಕಳಿ ಇದ್ದರೆ, ಎಲ್ಲಾ ಕಾನೂನಿನ ತೊಡಕನ್ನು ತೆಗೆದುಹಾಕಿ ಬಡವರ ಪರ ನಿಲ್ಲಬಹುದು ಎನ್ನುವುದಕ್ಕೆ ನಮ್ಮ ಸರ್ಕಾರದ ದಿಟ್ಟ ನಿಲುವೇ ಸಾಕ್ಷಿ. ಇದು ನಿಮ್ಮ ಹಕ್ಕು. ನಿಮ್ಮ ಹಕ್ಕಿಗೆ ಕಾನೂನಿನ ಮುದ್ರೆ ಹಾಕಲಾಗಿದೆ. ಒಂದು ಸರ್ಕಾರ ಬಡವರ ಪರವಾಗಿ ಮಿಡಿಯುವ ಸರ್ಕಾರವಿದ್ದರೆ, ಸಮಸ್ಯೆಗೆ ಪರಿಹಾರ ನೀಡುವ ನಿಲುವು ಇದ್ದರೆ ಇದು ಸಾಧ್ಯವಾಗುತ್ತದೆ. ಗುರು, ಹಿರಿಯರು, ದೇವರ ಪುಣ್ಯದಿಂದ ಕಾರ್ಯ ಸಾಧ್ಯವಾಗಿದೆ. ಈ ಅವಕಾಶ ನಮ್ಮ ಪಾಲಿಗೆ ಬಂದಿದೆ. ಇದನ್ನು ಜನ ಸ್ಮರಿಸಬೇಕುʼʼ ಎಂದು ಹೇಳಿದರು.

ಹಕ್ಕುಪತ್ರಗಳ ಮೂಲಕ ಬಡವರಿಗೆ ನೆಮ್ಮದಿ

ʻʻಹಕ್ಕುಪತ್ರಗಳನ್ನು ನೀಡಿ ನಿಜವಾಗಿ ಬಡವರಿಗೆ ನೆಮ್ಮದಿ ನೀಡಲಾಗಿದೆ. ಇದು ಪುಣ್ಯ ಗಳಿಸುವ ಕ್ರಮ. ಒಳ್ಳೆಯ ಕೆಲಸ ಮಾಡಲು ಪ್ರೇರಣೆ ದೊರೆತಿದೆ. ಇಲ್ಲಿ ಸರ್ಕಾರ ಏನೆಲ್ಲಾ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಬಹಳ ದಿನಗಳ ಕನಸು ಈಡೇರುತ್ತಿದೆ. ಗ್ರಾಮ ಒನ್ ಅಡಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಹಲೋ ಕಂದಾಯ ಸಚಿವರೆ ಯೋಜನೆಯಡಿ ಒಂದೂವರೆ ಕೋಟಿ ಜನರಿಗೆ ಅನುಕೂಲವಾಗಿದೆ. ಜನರಿಗೆ ಹತ್ತಿರವಾಗಿ, ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ʻʻಇಡೀ ಕರ್ನಾಟಕದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಸಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರ ಬದ್ಧತೆಯಿಂದ ಇದು ಸಾಧ್ಯವಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳಿಗೆ ಮಂಜೂರಾತಿ, ಸುಮಾರು 3 ಲಕ್ಷ ಮನೆಗಳಿಗೆ ವಿದ್ಯುಚ್ಛಕ್ತಿ, ಬಡವರಿಗೆ 12 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದು ಬದುಕಿಗೆ ನೆಮ್ಮದಿ, ನೆರಳು ನೀಡುವ ಕಾರ್ಯಕ್ರಮ ಇದುʼʼ ಎಂದರು.

ಕಂದಾಯ ಸಚಿವ ಆರ್.ಅಶೋಕ್, ಸಚಿವ ಎಂ.ಟಿ. ಬಿ ನಾಗರಾಜ್, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್ , ಎಂ.ಕೃಷ್ಣಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version