ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (Govt Employees) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ 2023-24ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಶನಿವಾರ ಚಾಲನೆ ನೀಡಲಾಯಿತು. ಮೂರು ದಿನಗಳ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಉದ್ಘಾಟಿಸಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ತಾವೆಲ್ಲರೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದೀರಿ. ನಮ್ಮ ಅವಧಿಯಲ್ಲಿ ಇದು 5ನೇ ರಾಜ್ಯ ಮಟ್ಟದ ಕ್ರೀಡಾಕೂಟವಾಗಿದ್ದು, ಈ ಹಿಂದೆ ಎರಡು ವರ್ಷಗಳಿಗೊಮ್ಮೆ ಕ್ರೀಡಾಕೂಟವನ್ನು ನಡೆಸಲಾಗುತ್ತಿತ್ತು. ನಾನು ರಾಜ್ಯಾಧ್ಯಕ್ಷರಾದ ನಂತರ ಪ್ರತಿ ವರ್ಷ ಕ್ರೀಡಾಕೂಟಗಳನ್ನು ನಡೆಸಲು ಸರ್ಕಾರದ ಮೇಲೆ ಒತ್ತಡ ತಂದದ್ದಲ್ಲದೇ ಕ್ರೀಡಾ ಕೂಟದ ಅನುದಾನವನ್ನು 50 ಲಕ್ಷ ದಿಂದ 3 ಕೋಟಿಗೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಪಡೆಯುವ ಮೂಲಕ ವಿಶಿಷ್ಟ ರೀತಿಯನ್ನು ಕ್ರೀಡಾಕೂಟವನ್ನು ನಡೆಸೋಣವೆಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ಮೂರು ದಿನಗಳ ಕಾಲ ಶುಚಿ-ರುಚಿಯಾದ ಊಟ- ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕ್ರೀಡಾಪಟುಗಳಲ್ಲಿ ಮನವಿ ಮಾಡಿದರು.
ಇದನ್ನೂ ಓದಿ | Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗ್ಗೆ ಅರಮನೆ ಮೈದಾನದಲ್ಲಿ ಬೆಂಗಳೂರಿನಲ್ಲಿ ಸಂಘದ ವತಿಯಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಆಯೋಜಿಸಲಾಗಿದ್ದ “ನಮ್ಮಭಿಮಾನದ ಅಭಿನಂದನೆ” ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳು ಸಂಘದ ಈ ಕಾರ್ಯವನ್ನು ಶ್ಲಾಘಿಸಿದ್ದನ್ನು ಹಾಗೂ ಸಂಘದ ಪ್ರಮುಖ ಬೇಡಿಕೆಗಳಾದ 1) ಹಳೇ ಪಿಂಚಣಿ ಯೋಜನೆ ಮಾರು ಜಾರಿ 2) ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರ ಅನುಷ್ಠಾನ ಹಾಗೂ 3) ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬದ್ಧತೆಯನ್ನು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಆರ್ ಚೇತನ್ ಮಾತನಾಡಿ, ಕ್ರೀಡಾಪಟುಗಳು ಉತ್ಸುಕತೆಯಿಂದ ಭಾಗವಹಿಸಿದ್ದೀರಿ. ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಎಲ್ಲರೂ ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಉತ್ತಮ ಕೀರ್ತಿ ತನ್ನಿರಿ ಎಂದು ಶುಭ ಹಾರೈಸಿದರು.
ಇದಕ್ಕೂ ಮೊದಲು ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಆರ್. ಚೇತನ್ ಅವರು ಧ್ವಜಾರೋಣ ನೆರವೇರಿಸಿದರು. ಉಪಾಧ್ಯಕ್ಷರಾದ ನರಸಿಂಹರಾಜುರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಮುಗಿದ ನಂತರ ಸಂಜೆ. 6.30ಕ್ಕೆ ಸರಿಗಮ ಖ್ಯಾತಿಯ ಶ್ರೀ ಕಂಬದ ರಂಗಯ್ಯ ಮತ್ತು ತಂಡದವರಿಂದ “ಸಂಗೀತ ರಸ ಸಂಜೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ಯ ಎಲ್ಲಾ ಜಿಲ್ಲೆಗಳು ಮತ್ತು ಸಚಿವಾಲಯ ಸೇರಿದಂತೆ ಸುಮಾರು 11000 ಸರ್ಕಾರಿ ನೌಕರರ ಕ್ರೀಡಾಪಟುಗಳು ಕ್ರೀಡೆಗಳಿಗೆ ನೋಂದಾಯಿಸಿಕೊಂಡಿದ್ದರು. 77 ವಿವಿಧ ವೈಯಕ್ತಿಕ ಮತ್ತು ಗುಂಪು ಕ್ರೀಡೆಗಳು ಹಾಗೂ 18 ಸಾಂಸ್ಕೃತಿಕ, ಸಂಗೀತ ಜನಪದ ಸ್ಪರ್ಧೆಗಳು ನಡೆಯಲಿವೆ. ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ಕ್ರೀಡಾಕೂಟಗಳನ್ನು ಸಂಘಟಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಸರ್ಕಾರಿ ಶಾಲಾ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರುಗಳೂ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಟ್ರೋಪಿ, ಕ್ರೀಡಾ ಬ್ಯಾಗ್‌ಗಳನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ | Job Alert: ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಕಾರ್ಯಕ್ರಮದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರಾದ ಕೆ. ಶಶಿಕಲಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಗೌರವಾಧ್ಯಕ್ಷರಾದ ಬಿ.ಎಚ್.ವೆಂಕಟೇಶಯ್ಯ, ಹಿರಿಯ ಉಪಾಧ್ಯಕ್ಷರುಗಳಾದ ಎಂ.ವಿ. ರುದ್ರಪ್ಪ, ಬಸವರಾಜು, ರಾಜ್ಯ ಖಜಾಂಚಿಗಳಾದ ಡಾ. ಎಸ್. ಸಿದ್ದರಾಮಣ್ಣ ರಾಜ್ಯ ಕಾರ್ಯದರ್ಶಿಗಳಾದ ಡಾ. ನೆಲ್ಕುದ್ರಿ ಸದಾನಂದಪ್ಪ ಸೇರಿ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ರಾಜ್ಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.