Site icon Vistara News

Taxi Fare revises : ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಮೂಗುದಾರ; ಏಕರೂಪ ದರ ನಿಗದಿ ಮಾಡಿದ ಸರ್ಕಾರ

Karnataka government revises taxi fare

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯಾದ್ಯಂತ ಇರುವ ಟ್ಯಾಕ್ಸಿ ಪ್ರಯಾಣ ಹಾಗೂ ಸಾಗಾಣಿಕಾ ದರವನ್ನು ಸಾರಿಗೆ ಇಲಾಖೆಯು (Taxi Fare revises) ಏಕರೂಪ ಮಾಡಿದೆ. ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್‌ ನಿಯಮಗಳಡಿ ಕಾರ್ಯಾಚರಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರವನ್ನು ಒಂದೇ ಮಾದರಿಯಲ್ಲಿ ನಿಗಧಿಪಡಿಸಲಾಗಿದೆ. ಈ ಬಗ್ಗೆ ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಈ ಮೂಲಕ ಟ್ಯಾಕ್ಸಿ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್‌ ಹಾಕಿದೆ.

ಆ್ಯಪ್‌ ಆಧಾರಿತ ಅಗ್ರಿಗೇಟರ್‌ ಕಂಪನಿಗಳ ವಿರುದ್ಧ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹೊಸ ದರ ಅಸ್ತ್ರ ಪ್ರಯೋಗ ಮಾಡಿದೆ. ತಕ್ಷಣದಲ್ಲೇ ಅನ್ವಯವಾಗುವಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ಆದೇಶ ಹೊರಡಿಸಿದ್ದಾರೆ.

2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ‌ ನಿಗದಿ ಮಾಡಿತ್ತು. ಆದರೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ 3-4 ಪಟ್ಟು ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡಲಾಗುತ್ತಿತ್ತು. ಸಿಟಿ ಟ್ಯಾಕ್ಸಿ ಸೇವೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ ಸಂಬಂಧ ಜನರಿಂದ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಅಗ್ರಿಗೇಟರ್‌ ಕಂಪನಿ ಹಾಗೂ ಇತರೆ ಟ್ಯಾಕ್ಸಿ ಚಾಲಕರ ಆಟಾಟೋಪಕ್ಕೆ ಬ್ರೇಕ್‌ ಹಾಕಲು ಏಕರೂಪದ ದರ ನಿಗದಿಪಡಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಇನ್ನೂ ಏಕರೂಪ ದರ ನಿಗದಿ ಪಡಿಸಿದ ಸರ್ಕಾರದ ನಿರ್ಧಾರವನ್ನು ಚಾಲಕರು ಸ್ವಾಗರ್ತಿಸಿದ್ದಾರೆ. ಆದರೆ ಈ ಆದೇಶದ ಪಾಲನೆಯನ್ನು ಅಗ್ರಿಗೇಟರ್ ಸಂಸ್ಥೆಗಳು ಮಾಡುತ್ತಾರಾ? ಈ ದರಗಳ ಪಾಲನೆ ಆಗದಿದ್ದಲ್ಲಿ ಸಾರಿಗೆ ಇಲಾಖೆಯ ಕ್ರಮ ಏನು? ಮುಂದಿನ ನಡೆ ಏನು? ಎಂದು ಪ್ರಶ್ನಿಸಿದ್ದಾರೆ.

ನಿಗದಿತ ದರ ಹೀಗಿದೆ

10 ಲಕ್ಷ ರೂ. ಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಕನಿಷ್ಠ ದರ 100ರೂ ಇದ್ದು, ಪ್ರತಿ ಕಿ.ಮೀಗೆ 24 ರೂ. ನಿಗಧಿ ಮಾಡಲಾಗಿದೆ. 10-15 ಲಕ್ಷದವರಿಗೆ ಕನಿಷ್ಠ ದರ 115 ರೂ. ಪ್ರತಿ ಕಿ ಮೀಗೆ 28 ರೂ. ನಿಗಧಿ ಮಾಡಲಾಗಿದೆ. ಇನ್ನೂ 15 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ ಕನಿಷ್ಠ ದರ 130 ರೂ. ಪ್ರತಿ ಕಿ.ಮೀಗೆ 32 ರೂ ನಿಗಧಿ ಮಾಡಲಾಗಿದೆ.

ಜತೆಗೆ ಲಗೇಜ್ ದರ ಮೊದಲಿನ 120 ಕೆಜಿ ವರೆಗೆ ಉಚಿತ ಇರಲಿದೆ ನಂತರದ ಪ್ರತಿ 30 ಕಿ. ಗ್ರಾಂಗೆ ಅಥವಾ ಭಾಗಕ್ಕೆ 7 ರೂ ನಿಗಧಿ ಮಾಡಲಾಗಿದೆ. ಕಾಯುವಿಕೆ ದರ (Waiting Charge) ಮೊದಲು 5 ನಿಮಿಷದವರೆಗೆ ಉಚಿತ ಇರಲಿದೆ, ನಂತರ ಪ್ರತಿ ನಿಮಿಷಕ್ಕೆ 1 ರೂ. ನಿಗಧಿ ಮಾಡಲಾಗಿದೆ. ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ. 10ರಷ್ಟು ಹೆಚ್ಚುವರಿ ದರ ನಿಗಧಿಯಾಗಿದೆ.

ಇನ್ನೂ ಸಿಟಿ ಟ್ಯಾಕ್ಸಿ/ ಅಗ್ರಿಗೇಟರ್‌ಗಳು ಅನ್ವಯಿಸುವಂತಹ ಜಿಎಸ್‌ಟಿ ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಇನ್ನು ಮುಂದೆ ಸಮಯದ ಆಧಾರದ ಮೇಲೆ ದರವನ್ನು ವಸೂಲಿ ಮಾಡುವಂತಿಲ್ಲ. ಸರ್ಕಾರದಿಂದ ಕಿ.ಮೀ ಆಧಾರದಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version