ಬೆಂಗಳೂರು: ಕೊನೆಗೂ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ (Chamarajapete maidan) ಗಣರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಹೀಗಾಗಿ ಜನವರಿ ೨೬ರಂದು ಬೆಳಗ್ಗೆ ೯ ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಆದರೆ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.
ಕಳೆದ ಬಾರಿ ಭಾರಿ ವಾದ ವಿವಾದಗಳ ನಡುವೆಯೂ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ ಪ್ರೇರೇಪಣೆಗೊಂಡ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆ ಹಿಂದೂ ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಕೋರಿದ್ದವು. ಸರ್ಕಾರ ಅಳೆದೂ ತೂಗಿ ಈಗ ಅವಕಾಶವನ್ನು ನೀಡಿದೆ.
ಧ್ವಜಾರೋಹಣಕ್ಕೆ ಮಾತ್ರ ಅವಕಾಶ
ಮೈದಾನದಲ್ಲಿ ಕಳೆದ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆ ಮಾದರಿಯಲ್ಲೇ ಕೇವಲ ಧ್ವಜಾರೋಹಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಸಾಂಸ್ಕೃತಿ ಕಾರ್ಯಕ್ರಮ ಸೇರಿ ಉಳಿದ ಆಚರಣೆಗಳಿಗೆ ಅನುಮತಿ ಇಲ್ಲ. ಕಾರ್ಯಕ್ರಮದ ಉಸ್ತುವಾರಿಯನ್ನು ಯಾವುದೇ ಸಂಘಟನೆಗಳಿಗೆ ನೀಡಲಾಗಿಲ್ಲ. ಖುದ್ದು ಕಂದಾಯ ಇಲಾಖೆಯೇ ಧ್ವಜಾರೋಹಣವನ್ನು ನಡೆಸಲಿದೆ. ಕಂದಾಯ ಇಲಾಖೆಯ ಎಸಿ ಶಿವಣ್ಣ ಅವರು ಧ್ವಜಾರೋಹಣ ನಡೆಸಲಿದ್ದಾರೆ.
ಧ್ವಜಾರೋಹಣಕ್ಕೆ ಸಿದ್ಧತೆ
ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಕಂದಾಯ ಇಲಾಖೆ ಧ್ವಜಾರೋಹಣಕ್ಕೆ ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಈಗಾಗಲೇ ಮೈದಾನವನ್ನು ಸ್ವಚ್ಛ ಮಾಡಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ.
ಪರಿಸರದ ಶಾಲೆಗಳ ಮಕ್ಕಳನ್ನು ಧ್ವಜಾರೋಹಣಕ್ಕೆ ಕರೆಸಲಾಗುತ್ತದೆ. ಸ್ಥಳೀಯ ಶಾಸಕರು, ಸಂಸದರು ಹಾಗೂ ಚಾಮರಾಜಪೇಟೆ ನಾಗರಿಕ ವೇದಿಕೆಯ ಒಬ್ಬರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಧ್ವಜಾರೋಹಣ ವೇಳೆ ಚಾಮರಾಜಪೇಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ನಿಯೋಜನೆಗೆ ಜಿಲ್ಲಾಡಳಿತ ಮಾನವಿ ಮಾಡಿದೆ. ಮೈದಾನದ ಸುತ್ತ ಪೊಲೀಸ್ ಕಣ್ಗಾವಲಿನ ಜತೆಗೆ ೫೦ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಬೃಹತ್ ಕಟ್ಟಡಗಳ ಮೇಲಿನಿಂದಲೂ ಕಣ್ಗಾವಲು ಇರಿಸಲಾಗುತ್ತದೆ.
ಇದನ್ನೂ ಓದಿ | Chamarajpet Ground : ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರವೇ ಹಾರಿಸಲಿದೆ ತ್ರಿವರ್ಣ ಧ್ವಜ