ಮಂಗಳೂರು: ಸರ್ಕಾರಿ ಶಾಲೆಯ (Govt. school) ಆ ಮಕ್ಕಳನ್ನು ಇಡೀ ಊರು ಸೇರಿ ಸ್ವಾಗತಿಸಿದ ರೀತಿಯೇ ರೋಮಾಂಚಕವಾಗಿತ್ತು. ತೆರೆದ ಜೀಪ್‌ನಲ್ಲಿ ಮಕ್ಕಳನ್ನು ಕುಳ್ಳಿರಿಸಿ ಕರೆತರಲಾಗಿತ್ತು. ದಾರಿ ಮಧ್ಯೆ ನಿಲ್ಲಿಸಿ ಅವರ ಕೊರಳಿಗೆ ಹೂವಿನ ಹಾರ ಹಾಕುವುದು, ಜೈಕಾರ ಹಾಕುವುದು, ಜನರೆಲ್ಲ ಸೇರಿ ಕೈ ಕುಲುಕಿ ಸಂಭ್ರಮಿಸುವುದು.. ಹೀಗೆ ಬಗೆ ಬಗೆಯಲ್ಲಿ ಜನರು ಅಭಿಮಾನ ತೋರಿದರು. ಆ ಹುಡುಗರಂತೂ ಕುಣಿದು ಕುಪ್ಪಳಿಸಿದರು. ಇದನೆಲ್ಲ ನೋಡಿದಾಗ ಎಲ್ಲರ ಹೃದಯಗಳು ಖುಷಿಯಿಂದ, ಹೆಮ್ಮೆಯಿಂದ ತುಂಬಿ ಹೋದವು.
ಅಂದ ಹಾಗೆ ಈ ದೃಶ್ಯಗಳೆಲ್ಲ ಕಂಡು ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಕೆಪದವು ಗ್ರಾಮದಲ್ಲಿ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಕಬಡ್ಡಿ ಆಡಿ ಗೆದ್ದು ಅದರಲ್ಲೊಬ್ಬ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದನ್ನು ಇಡೀ ಊರಿಗೆ ಊರೇ ಸಂಭ್ರಮಿಸಿದೆ. ʻಸಾಧನೆ ತೋರಿದ ನಿಮಗೆಲ್ಲ ನಮ್ಮಯ ಹೆಮ್ಮೆಯ ಚಪ್ಪಾಳೆʼ ಅಂತಾ ಹಾಡು ಹಾಕಿ ಮಕ್ಕಳನ್ನು ಇಡೀ ಗ್ರಾಮವೇ ಕೊಂಡಾಡಿದೆ.
ಹೌದು, ಈ ಶಾಲೆಯ ಮಕ್ಕಳು ಆರಂಭದಲ್ಲಿ ವಲಯ ಮಟ್ಟದಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಈ ಮಕ್ಕಳನ್ನು ತಾಲೂಕು ಮಟ್ಟಕ್ಕೆ ಕಳಿಸಬೇಕೇ ಬೇಡವೇ ಎನ್ನುವ ಬಗ್ಗೆ ಗೊಂದಲವಿತ್ತು. ಕೊನೆಗೆ ಶಾಲೆಯ ದೈಹಿಕ ಶಿಕ್ಷಕರು ಧೈರ್ಯ ಮಾಡಿ ತಾಲೂಕು ಮಟ್ಟದಲ್ಲಿ ಆಡಿಸಿದರು. ಅಲ್ಲೇ ಈ ಮಕ್ಕಳ ನಿಜವಾದ ಆಟ ಗೊತ್ತಾಗಿದ್ದು!
ಎದುರಾಳಿ ತಂಡಗಳನ್ನೆಲ್ಲ ಸೋಲಿಸಿ ಕಕ್ಕೆಪದವು ಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದರು. ಆಗ ತನ್ನ ವಿದ್ಯಾರ್ಥಿಗಳ ಸಾಮರ್ಥ್ಯ ಅರಿತ ದೈಹಿಕ ಶಿಕ್ಷಕರು ಮಕ್ಕಳಿಗೆ ಮತ್ತಷ್ಟು ತಾಲೀಮು ಕೊಟ್ಟು ಜಿಲ್ಲಾ ಮಟ್ಟದಲ್ಲೂ ಆಡಿಸಿದರು. ಅಲ್ಲೂ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿ ಮತ್ತೆ ಪ್ರಥಮ ಸ್ಥಾನ ಗಳಿಸಿ ಇಡೀ ಊರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲದೇ ಮೈಸೂರು ವಿಭಾಗಕ್ಕೇ ಹೆಮ್ಮೆ ತಂದಿದ್ದಾರೆ.
ಮೈಸೂರು ವಿಭಾಗೀಯ ಮಟ್ಟದಲ್ಲಿ ಕಕ್ಕೆಪದವು ಹಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳು ತಂಡವನ್ನು ಪ್ರತಿನಿಧಿಸಿದ್ದರು. ಸಾಬಿಕ್, ಶೋಭಿತ್, ಹೇಮಂತ್, ಚಿಂತನ್ ಮತ್ತು ಸಫ್ವಾನ್ ತಮ್ಮ ಅದ್ಭುತ ಪ್ರದರ್ಶವನ್ನು ತೋರಿಸಿದ್ದರು. ವಿಶೇಷ ಅಂದ್ರೆ ಈ ಶಾಲೆಯ ಸಫ್ವಾನ್ ಮತ್ತೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಊರವರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾನೆ.
ಸದ್ಯ ವಿದ್ಯಾರ್ಥಿಗಳ ಸಾಧನೆಗೆ ಕಕ್ಕೆಪದವು ಗ್ರಾಮವೇ ಸಂಭ್ರಮಪಟ್ಟಿದ್ದು, ದೈಹಿಕ ಶಿಕ್ಷಕರು ಮತ್ತು ಶಾಲೆಯ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅದೇನೇ ಇರಲಿ, ಸರ್ಕಾರಿ ಶಾಲೆ ಅಂತಾ ಮೂಗುಮುರಿಯುವವರ ಮಧ್ಯೆ ಮನಸ್ಸು ಮಾಡಿದರೆ ಸರ್ಕಾರಿ ಶಾಲೆಯ ಮಕ್ಕಳು ಏನೂ ಮಾಡಬಲ್ಲರು ಅನ್ನೋದನ್ನು ಕಕ್ಕೆಪದವು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ತೋರಿಸಿಕೊಟ್ಟಿದ್ದಾರೆ.
ಕಬಡ್ಡಿ ತಂಡದ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಟ್ಟ ಆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಆಸಿದ್, ಮಕ್ಕಳಿಗೆ ಕಬಡ್ಡಿ ಕೋಚಿಂಗ್ ಕೊಡುತ್ತಿದ್ದ ಕಾರ್ತಿಕ್ ಹಾಗೂ ಗಣೇಶ್, ವಸತಿ ಶಾಲೆಯಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಿ ಕೊಟ್ಟ ತಾಲೂಕು ನೌಕರರ ಸಂಘದ ಅಧ್ಯಕ್ಷರು ಉಮಾನಾಥ ರೈ ಮೇರವು ಹಾಗೂ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯರಾಮ, ಟ್ರ್ಯಾಕ್ ಶೂಟ್ ವ್ಯವಸ್ಥೆ ಮಾಡಿಸಿದ ಅಳಿಕೆಯ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ ಶ್ರೀ ರೂಪಿತ್, ಶಾಲಾ ದೈಹಿಕ ಶಿಕ್ಷಕಿ ವಿಶಾಲಾಕ್ಷಿಯವರ ಮೊದಲ ಶ್ರಮ ಮಕ್ಕಳ ಈ ಸಾಧನೆಗೆ ಕಾರಣ ಅಂತ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Convocation | ಪ್ರಥಮ ರ‍್ಯಾಂಕ್ ಪಡೆದ ಅವಳಿ ಮಕ್ಕಳ ತಾಯಿ; ಅಭೂತಪೂರ್ವ ಸಾಧನೆ