Site icon Vistara News

Ola, uber tariff | ಹೈಕೋರ್ಟ್‌ಗೆ ದರ ಪಟ್ಟಿ ಸಲ್ಲಿಸಿದ ಸರ್ಕಾರ, ಮುಂದಿನ ವಿಚಾರಣೆ ಡಿಸೆಂಬರ್‌ 5ಕ್ಕೆ

ola uber auto

ಬೆಂಗಳೂರು: ಓಲಾ, ಉಬರ್‌ ಸೇರಿದಂತೆ ಆಟೋ ಸೇವೆಯ ಪರವಾನಗಿ ಹೊಂದಿರುವ ಅಗ್ರಿಗೇಟರ್‌ ಸಂಸ್ಥೆಗಳು ವಿಧಿಸಬಹುದಾದ ಆಟೋ ಶುಲ್ಕದ ವಿವರವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸೋಮವಾರ ನೀಡಿದೆ.

ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ 5. ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ದರ ನಿಗದಿಗೆ ಸಂಬಂಧಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ.

ಈ ಹಿಂದಿನ ವಿಚಾರಣೆ ವೇಳೆ ಪೀಠವು ಅರ್ಜಿದಾರ ಕಂಪೆನಿಗಳು ಆಟೋರಿಕ್ಷಾ ಸೇವೆಗೆ ದರ ನಿಗದಿಪಡಿಸಿ ಸರ್ಕಾರ 2021ರ ನವೆಂಬರ್ 6ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿರುವ ದರದ ಜೊತೆಗೆ ಶೇ.10ರಷ್ಟು ಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆಯನ್ನು ಪಡೆಯಬೇಕು. ದರ ನಿಗದಿಪಡಿಸುವವರೆಗೆ ಅಗ್ರಿಗೇಟರ್ ಕಂಪೆನಿಗಳ ವಿರುದ್ಧ ಸರ್ಕಾರ ಬಲವಂತದ ಕ್ರಮ ಜರುಗಿಸಬಾರದು. ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿತ್ತು.

ಇದರ ನಡುವೆ ರಾಜ್ಯ ಸರ್ಕಾರ ಅಗ್ರಿಗೇಟರ್‌ ಸಂಸ್ಥೆಗಳಿಗೆ ಕೇವಲ ೫ % ಮತ್ತು ಜಿಎಸ್‌ಟಿಯನ್ನು ಮಾತ್ರ ವಿಧಿಸಲು ಅವಕಾಶ ನೀಡಿದೆ. ಇದು ಅಗ್ರಿಗೇಟರ್‌ ಸಂಸ್ಥೆಗಳಿಗೆ ಸಮಾಧಾನ ತಂದಿಲ್ಲ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್‌ ೫ರೊಳಗೆ ಹೈಕೋರ್ಟ್‌ನಲ್ಲಿ ಆಕ್ಷೇಪ ಸಲ್ಲಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ | Ola, uber tariff | ಓಲಾ, ಉಬರ್‌ ಆಟೋ ದರ ಫಿಕ್ಸ್‌: ಕನಿಷ್ಠ ದರಕ್ಕಿಂತ 5%+GST ಮಾತ್ರ ಹೆಚ್ಚು ಪಡೆಯಲು ಅವಕಾಶ

Exit mobile version