ಪುತ್ತೂರು: ಆಶ್ರಯ ವಸತಿ ಯೋಜನೆಯಡಿ (Housing Scheme) ಮನೆ ಕಟ್ಟಿಸಿಕೊಳ್ಳುವ ಆಸೆಯಲ್ಲಿ ಇಲ್ಲೊಂದು ಬಡ ಕುಟುಂಬವು ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಯಾ ಎಂಬಲ್ಲಿ ಈಗ ಬಡ ಕುಟುಂಬವು ತೀವ್ರ ಸಂಕಷ್ಟದಲ್ಲಿದೆ. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಮನೆಯವರು ಪ್ಲಾಸ್ಟಿಕ್ ಹೊದಿಕೆಯ ಜೋಪಡಿಯಲ್ಲಿಯೇ ಬದುಕಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಕಡ್ಯ ಗ್ರಾಮದ ಮೋನಪ್ಪ ಎಂಬುವವರ ಕುಟುಂಬವು ಆಶ್ರಯ ಮನೆಗಾಗಿ 2022ರಲ್ಲಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಇತ್ತೀಚೆಗಷ್ಟೇ ಮೋನಪ್ಪ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯಿತಿ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನೆಲೆಯಲ್ಲಿ ಇದ್ದ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕಿದ್ದ ಕುಟುಂಬವು ಪಂಚಾಯಿತಿಯಿಂದ ಹಣ ಬಿಡುಗಡೆಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿತ್ತು. ಈ ಲೆಕ್ಕಾಚಾರದಲ್ಲಿಯೇ ಕೈ ಸಾಲ ಪಡೆದು ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಅಡಿಪಾಯ ಆದರೂ ಹಣವಿಲ್ಲ
ಆದರೆ ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲಾಗದೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಹೊಸ ಮನೆಗಾಗಿ ಹಳೇ ಮನೆಯನ್ನೂ ಕೆಡವಿ ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲು ಜಾಗವೂ ಇಲ್ಲದ ಸ್ಥಿತಿಯಲ್ಲಿದೆ.
ಇದನ್ನೂ ಓದಿ: Monsoon Beauty Care: ಮಳೆಗಾಲದ ಸೌಂದರ್ಯಕ್ಕೆ 5 ಮ್ಯಾಜಿಕ್ ಬ್ಯೂಟಿ ಮಂತ್ರ
ಮಗನೊಂದಿಗೆ ತವರಿಗೆ ಹೋದ ಹೆಂಡತಿ
ಈಗ ಇವರಿಗೆ ವಾಸಕ್ಕೆ ಮನೆಯಲ್ಲಿ ಮನೆ ಜಾಗದ ಪಕ್ಕದಲ್ಲಿಯೇ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಅಲ್ಲದೆ, ಮಳೆ ಬೇರೆ ಆಗಾಗ ಬರುತ್ತಿರುವ ಕಾರಣ ಹೆಂಡತಿ, ಮಕ್ಕಳೊಂದಿಗೆ ಅಲ್ಲಿ ವಾಸ ಅಸಾಧ್ಯ. ಹೀಗಾಗಿ ಸರಿಯಾದ ಮನೆ ಇಲ್ಲದ ಕಾರಣ ಮನೆ ಯಜಮಾನ ಮೋನಪ್ಪ ಅವರು ತಮ್ಮ ಮಗನನ್ನು ಹೆಂಡತಿ ಜತೆಗೆ ಆಕೆಯ ತವರು ಮನೆಗೆ ಕಳಿಸಿದ್ದಾರೆ. ಅವರು ಮಾತ್ರ ಪ್ಲಾಸ್ಟಿಕ್ ಹೊದಿಕೆಯ ಜಾಗದಲ್ಲಿಯೇ ಜೀವನ ಸಾಗಿಸುವಂತಾಗಿದೆ.
ಶುರುವಾಗಲಿದೆ ಮಳೆಗಾಲ
ಮುಂಡೂರು ಪಂಚಾಯಿತಿಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಈ ಕುಟುಂಬದ ಸಮಸ್ಯೆಯ ಬಗ್ಗೆ ಮೌನ ವಹಿಸಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶವಾಗಿದ್ದು, ರಾಜ್ಯದಲ್ಲಿ ಯಾವಾಗ ಬೇಕಾದರೂ ಮಳೆಗಾಲ ಆರಂಭ ಆಗಬಹುದು. ಆದರೆ, ಇವರಿಗೆ ಅನುದಾನ ಇಲ್ಲದೆ, ಮುಂದೇನು ಮಾಡವುದು ಎಂಬ ಆತಂಕ ಮನೆ ಮಾಡಿದೆ. ದಿಕ್ಕೇ ತೋಚದ ಕುಟುಂಬ ಸದಸ್ಯರು ಈಗ ಆಕಾಶದ ಕಡೆಗೆ ಕೈ ತೋರಿಸಿಕೊಂಡು ಮರುಗುತ್ತಿದ್ದಾರೆ.
ಏನಾಗಿತ್ತು?
2022-23 ಸಾಲಿನಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಫೆಬ್ರವರಿ ತಿಂಗಳಲ್ಲಿ ಮನೆ ಕಟ್ಟಲು ಹಣ ಪಾಸ್ ಆಗಿದೆ ಎಂಬ ವಿಚಾರವನ್ನು ಪಂಚಾಯಿತಿಯಿಂದ ತಿಳಿಸಲಾಗಿತ್ತು. ಮನೆ ಕಟ್ಟುವ ಕೆಲಸ ಆರಂಭವಾದ ಬಳಿಕ ಹಂತಹಂತವಾಗಿ ಮೂರು ಹಂತದಲ್ಲಿ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಹಳೇ ಮನೆ ಕೆಡವಿ ಹೊಸ ಮನೆಗೆ ಪೌಂಡೇಷನ್ ಹಾಕಿದ್ದೆ. ಆದರೆ, ಆ ಬಳಿಕ ಇಲ್ಲಿಯವರೆಗೆ ನಯಾ ಪೈಸೆಯನ್ನು ಪಂಚಾಯಿತಿ ಬಿಡುಗಡೆ ಮಾಡಿಲ್ಲ. ಕುಡಿಯಲು ನೀರು ಸಹ ಇಲ್ಲ . ಪಂಚಾಯಿತಿಯವರು ಬಂದು ನೋಡಿ ಹೋಗುತ್ತಾರೆ. ಆದರೆ, ಹಣ ಬಿಡುಗಡೆ ಮಾಡುತ್ತಿಲ್ಲ. ಮನೆ ಇಲ್ಲದ ಕಾರಣ ಹೆಂಡತಿ ಮಗ ತವರು ಮನೆಯಲ್ಲಿ ಇದ್ದಾರೆ. ಮಳೆಗಾಲ ಬರ್ತಾ ಇದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಫಲಾನುಭವಿ ಮೋನಪ್ಪ ಅವರು ವಿಸ್ತಾರ ನ್ಯೂಸ್ ಬಳಿ ಅಳಲು ತೋಡಿಕೊಂಡಿದ್ದಾರೆ.
ಅನುದಾನ ಬಂದಿದ್ದರೂ ಬಿಡುಗಡೆ ಮಾಡಿಲ್ಲ
ಇವರ ಸಮಸ್ಯೆಯ ಬಗ್ಗೆ ಪಂಚಾಯಿತಿ ಬಳಿ ಮನವಿ ಮಾಡಿದ್ದೇವೆ. ಅನುದಾನ ಬಂದಿದ್ದರೂ ಇವರಿಗೆ ಬಿಡುಗಡೆ ಮಾಡಿಲ್ಲ. ಬೇರೆಯವರಿಗೆ ಅನುದಾನ ಬಿಡುಗಡೆಯಾಗಿದೆ. ಚುನಾವಣಾ ಕಾರಣದಿಂದ ವಿಳಂಬ ಆಗಿದೆ ಅಂತ ಹೇಳಿದ್ದಾರೆ. ತಕ್ಷಣ ಹಣ ಬಿಡುಗಡೆಗೆ ಆಗ್ರಹಿಸಿದ್ದೇವೆ ಎಂದು ಸಮಾಜ ಸೇವಕ ಗಿರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Mango Gift: ಕಹಿ ಮರೆತು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಮಾವಿನ ಹಣ್ಣು ಕಳುಹಿಸಿದ ‘ಮಮತಾ’ಮಯಿ ದೀದಿ!
ಪಂಚಾಯತ್ನ ಈ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಮನೆ ಕಟ್ಟಲು ಅನುದಾನ ನೀಡುವಂತೆ ಪಂಚಾಯಿತಿಗೆ ಒತ್ತಾಯ ಮಾಡಿದ್ದಾರೆ.