Site icon Vistara News

Grant of bail | ರಾಮಮಂದಿರ ಏಕೆ ಬೇಡ ಕೃತಿ ವಿವಾದ; ಸಾಹಿತಿ ಕೆ.ಎಸ್. ಭಗವಾನ್‌ಗೆ ಜಾಮೀನು ಮಂಜೂರು

K S Bhagavan Grant of bail

ಸಾಗರ: ರಾಮಮಂದಿರ ಏಕೆ ಬೇಡ? ಎಂಬ ಕೃತಿ ವಿವಾದದ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಮಂಗಳವಾರ (ಡಿ.೨೦) ಸಾಗರ ನ್ಯಾಯಾಲಯಕ್ಕೆ ಹಾಜರಾದರು. ಇಲ್ಲಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಮಂಜೂರು (Grant of bail) ಮಾಡಿದ್ದಾರೆ.

ರಾಮಮಂದಿರ ಏಕೆ ಬೇಡ ಎಂಬ ಕೃತಿಯಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ ಎಂದು ಸಂಘ ಪರಿವಾರದ ಕಾರ್ಯಕರ್ತ ಇಕ್ಕೇರಿಯ ಮಹಾಬಲೇಶ್ವರ ಎಂಬುವವರು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.

ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ದಿನಾಂಕ 02-11-2022ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್.ಪಿ. ಮೂಲಕ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು. ಖುದ್ದು ಹಾಜರಾಗಲು ಸಮನ್ಸ್ ಜಾರಿ ಮಾಡಿದ್ದಾಗ್ಯೂ ಕೆ.ಎಸ್.ಭಗವಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಇದರಿಂದ ಜೆಎಂಎಫ್‍ಸಿ ನ್ಯಾಯಾಲಯವು ಭಗವಾನ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿ ಪೇಟೆ ಠಾಣೆಗೆ ಸೂಚಿಸಿತ್ತು. ಈ ಸಂಬಂಧ ಭಗವಾನ್ ಅವರು ನಿರೀಕ್ಷಣಾ ಜಾಮೀನು ಕೋರಿ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಭಗವಾನ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ 10 ದಿನಗಳ ಒಳಗೆ ಪೊಲೀಸ್ ಮುಂದೆ ಹಾಜರಾಗುವಂತೆ, 1 ಲಕ್ಷ ರೂ. ವೈಯಕ್ತಿಕ ಬಾಂಡ್ ನೀಡುವಂತೆ ಆದೇಶ ಮಾಡಿತ್ತು.

ಇದನ್ನೂ ಓದಿ | Income Tax notice | ಬಿಹಾರದ ಬಡ ಕಾರ್ಮಿಕನಿಗೆ 14 ಕೋಟಿ ರೂ. ತೆರಿಗೆ ನೋಟಿಸ್‌, ಖಾಸಗಿ ಕಂಪನಿಗಳ ವಂಚನೆ?

ಈ ಹಿನ್ನೆಲೆಯಲ್ಲಿ ಭಗವಾನ್ ಅವರು ಸಾಗರ ನ್ಯಾಯಾಲಯಕ್ಕೆ ಮಂಗಳವಾರ (ಡಿ.೨೦) ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಶೈಲ ಬಗಾಡೆ ಜಾಮೀನು ನೀಡಿದರು. ನಂತರ ಭಗವಾನ್ ಅವರು ಪೇಟೆ ಠಾಣೆಗೆ ಹಾಜರಾದರು. ದೂರುದಾರರ ಪರ ನ್ಯಾಯವಾದಿ ಕೆ.ವಿ.ಪ್ರವೀಣ್ ವಾದ ಮಂಡಿಸಿದರೆ, ಭಗವಾನ್ ಪರವಾಗಿ ಎಚ್.ಬಿ.ರಾಘವೇಂದ್ರ ಮತ್ತು ಅಬ್ದುಲ್ ರಶೀದ್ ವಾದ ಮಂಡಿಸಿದರು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ವಸಿಷ್ಠ ಸಹಕಾರ ಸಂಘ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಲು ಕಾಂಗ್ರೆಸ್‌ ಒತ್ತಾಯ

Exit mobile version