Site icon Vistara News

Granth Mitra Abhiyana: ಗ್ರಂಥಾಲಯದಲ್ಲಿ ಎಲ್ಲ ವರ್ಗದ, ವಯಸ್ಸಿನವರಿಗೂ ಇದೆ ಅವಕಾಶ: ಉಮಾ ಮಹದೇವನ್

Granth Mitra Abhiyana karwar

#image_title

ಕಾರವಾರ: ಗ್ರಂಥಾಲಯವೆಂದರೆ (Granth Mitra Abhiyana) ಪುಸ್ತಕ ಮಾತ್ರವಲ್ಲದೆ. ಅದು ಕೌಶಲ್ಯ ಮತ್ತು ಚಟುವಟಿಕೆಯ ತಾಣವಾಗಿದೆ. ಇಲ್ಲಿ ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರು ಬಂದು ಕುಳಿತುಕೊಂಡು ಓದುವ ಹಕ್ಕಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಹೇಳಿದರು.

ಕಾರವಾರ ತಾಲೂಕಿನ ಶಿರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಖೇರಿ ಗ್ರಂಥಾಲಯದಲ್ಲಿ ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ತಾಲೂಕು ಪಂಚಾಯಿತಿ ಕಾರವಾರ, ಗ್ರಾಮ ಪಂಚಾಯಿತಿ ಶಿರವಾಡ ಹಾಗೂ ಆಕಾಂಕ್ಷಾ ಚಾರಿಟೆಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಶನಿವಾರ (ಫೆ. 25) ನಡೆದ ಗ್ರಂಥ ಮಿತ್ರ ಅಭಿಯಾನ ಕಾರ್ಯಕ್ರಮದ ವಿಡಿಯೊ ಸಂವಾದದಲ್ಲಿ ಮಾತನಾಡಿದರು.

ಮಕ್ಕಳಿಗೆ ಗ್ರಂಥಾಲಯದ ಮೂಲಕ ಎಲ್ಲ ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯದ 6000 ಗ್ರಾಮ ಪಂಚಾಯಿತಿಗಳಲ್ಲಿ 5600ಕ್ಕಿಂತ ಹೆಚ್ಚು ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 330 ಗ್ರಂಥಾಲಯಗಳಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಓದುವ ಬೆಳಕು ಕಾರ್ಯಕ್ರಮದಡಿ 6ರಿಂದ 18 ವರ್ಷದ ಎಲ್ಲ ಮಕ್ಕಳಿಗೆ ಉಚಿತ ಸದಸ್ಯತ್ವವನ್ನು ನೀಡಲಾಗಿದ್ದು, ಇಡೀ ರಾಜ್ಯದಲ್ಲಿ 33 ಲಕ್ಷ ಮಕ್ಕಳಿಗೆ ಉಚಿತ ನೋಂದಣಿ ಮಾಡಿಕೊಡಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಕೇಂದ್ರ ಬಜೆಟ್‌ನಲ್ಲಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ನಿರ್ಮಾಣ ಮಾಡಲು ನಿರ್ಣಯಿಸಲಾಗಿದೆ. 3800 ಗ್ರಂಥಾಲಯಗಳನ್ನು ಪುನಶ್ಚೇತನ ಮಾಡಲಾಗಿದ್ದು, ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಅಷ್ಟೇ ಅಲ್ಲದೆ ಮಕ್ಕಳನ್ನು ಆಕರ್ಷಿಸಲು ಚೆಸ್, ಕೇರಂನಂತಹ ಆಟಗಳ ಸಲಕರಣೆಗಳನ್ನು ಒದಗಿಸಲಾಗಿದೆ. ಮನರಂಜನೆಯನ್ನು ನೀಡುವ ಮೂಲಕ ಕಲಿಕೆಯತ್ತ ಅವರನ್ನು ಸೆಳೆಯಲಾಗುತ್ತದೆ. ನಂತರ ಡಿಜಿಟಲ್ ಕೌಶಲ್ಯಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದು ಸಮುದಾಯ ಆಧಾರಿತ ಕಾರ್ಯಕ್ರಮವಾಗಿದ್ದು, ಇದನ್ನು ಯಶಸ್ವಿಯಾಗಿಸಲು ಎಲ್ಲ ಅಧಿಕಾರಿಗಳು ಹಾಗೂ ಸಂಸ್ಥೆಗಳು ಕೈಜೋಡಿಸಬೇಕು” ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ಮಕ್ಕಳಲ್ಲಿ ಓದಿನ ಆಸಕ್ತಿ ಮೂಡಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಎಲ್ಲ ವಿಷಯಗಳ ಮಾಹಿತಿ ಮಕ್ಕಳಿಗೆ ಸಿಗುತ್ತದೆ. ಆದರೂ ಅವರಿಗೇಕೆ ಗ್ರಂಥಾಲಯದ ಅವಶ್ಯಕತೆ ಇದೆ? ಆ ಮಕ್ಕಳು ಗ್ರಂಥಾಲಯಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು. ಅವರು ಗಣಿತ ವಿಜ್ಞಾನ ವಿಷಯಗಳ ಜತೆಗೆ ಡಿಜಿಟಲ್ ಲೈಬ್ರರಿಯನ್ನು ಬಳಸುವ ಮೂಲಕ ಸಾಮಾನ್ಯ ಜ್ಞಾನವನ್ನು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮತ್ತು ಗ್ರಾಮದ ಸ್ವಯಂ ಸೇವಕರು ಮಕ್ಕಳಿಗೆ ಪ್ರತಿ ಶನಿವಾರ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Shilpa Shetty: ಬಾಜೀಗರ್ ಹಾಡಿನೊಂದಿಗೆ ವರ್ಕೌಟ್‌ ವಿಡಿಯೊ ಹಂಚಿಕೊಂಡ ಶಿಲ್ಪಾ ಶೆಟ್ಟಿ

ನಂತರದಲ್ಲಿ ಆಕಾಂಕ್ಷಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಶಾ ಭಟ್ ಮಾತನಾಡಿ, ಈಗಿನ ವಿದ್ಯಾರ್ಥಿಗಳು ದಿನಪತ್ರಿಕೆ, ಪುಸ್ತಕಗಳನ್ನು ಓದದೇ ಇರುವುದರಿಂದ ಅವರಿಗೆ ಸಾಮಾನ್ಯ ಜ್ಞಾನದ ಕೊರತೆ ಉಂಟಾಗುತ್ತದೆ. ಆದ್ದರಿಂದ ಆಕಾಂಕ್ಷಾ ಸಂಸ್ಥೆಯು ಯಾವುದೇ ಪ್ರತಿಫಲವನ್ನು ಬಯಸದೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಪ್ರಾರಂಭಿಸುವ ಮೂಲಕ ಅವರಿಗೆ ಶಿಕ್ಷಣ, ಕೌಶಲ್ಯ ನೀಡಲಾಗುತ್ತಿದೆ. ಮತ್ತು ಗ್ರಾಮದ ಯುವಕರು ಸೇವಾ ಮನೋಭಾವದಿಂದ ವಿಜ್ಞಾನ ಗಣಿತ ಮತ್ತು ಇತರೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ” ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪೂಜಾ ಮಾಂಜರೇಕರ್, ಸದಸ್ಯರಾದ ಸಿದ್ದಾರ್ಥ ನಾಯ್ಕ, ಉಲ್ಲಾಸ್ ಬಾಂದೇಕರ್,ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್ ನಾಯ್ಕ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ ಎನ್., ಶಿಕ್ಷಣ ಸಂಯೋಜಕ ಪ್ರಕಾಶ್ ಚೌಹಾಣ್, ಸಿಆರ್‌ಪಿ ಶಾಲಾ ಶಿಕ್ಷಕಿ ಪುಷ್ಪಲತಾ ನಾಯ್ಕ, ಗ್ರಂಥ ಪಾಲಕಿ ದಿವ್ಯಾ ಮಾಜಾಲಿಕರ್ ಹಾಗೂ ಜಿಲ್ಲಾ ಐಇಸಿ ಸಂಯೋಜಕರು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಪಿಡಿಒ ಮತ್ತು ಮಕ್ಕಳು ವಿಡಿಯೋ ಸಂವಾದದ ಮೂಲಕ ಹಾಜರಿದ್ದರು.

ಇದನ್ನೂ ಓದಿ: Rashmi Gautam: ಸಂಕಷ್ಟದಲ್ಲಿ ಟಾಲಿವುಡ್‌ ನಿರೂಪಕಿ, ನಟಿ ರಶ್ಮಿ ಗೌತಮ್!

Exit mobile version