ಬೆಂಗಳೂರು/ಮಂಗಳೂರು: ಕ್ವೆಸ್ಟ್ ಅಲಯನ್ಸ್ ಎಂಬ ಸಂಸ್ಥೆಯು ಭಾರತದಲ್ಲಿ ಮೂರು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಹಸಿರು ಐಟಿಐಗಳಾಗಿ ಅಭಿವೃದ್ಧಿಪಡಿಸಲಿದೆ. ದೇಶದ ಪ್ರಥಮ ಹಸಿರು ಐಟಿಐ ಎಂಬ ಹೆಗ್ಗಳಿಕೆಗೆ ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐ (Green ITIs) ಪಾತ್ರವಾಗಲಿದೆ.
ಗುಜರಾತಿನ ಹಾಲೋಲ್ ಹಾಗೂ ಅಸ್ಸಾಂನ ಸಿಲ್ಚಾರ್‌ನ ಸ್ರಿಕೊನ ಕೈಗಾರಿಕಾ ತರಬೇತಿ ಕೇಂದ್ರಗಳು ಹಸಿರು ಐಟಿಐಗಳಾಗಿ ಅಭಿವೃದ್ಧಿ ಹೊಂದಲಿರುವ ಇತರ ಎರಡು ಐಟಿಐಗಳು. ಐಟಿಐಗಳ ಹಸಿರೀಕರಣ ಯೋಜನೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಿದ್ದು ಮೂಲಸೌಕರ್ಯ, ಜ್ಞಾನಗ್ರಹಣ ಹಾಗೂ ಹಸಿರು ವೃತ್ತಿಗಳಿಗಾಗಿ ವಿದ್ಯಾರ್ಥಿಗಳ ಸನ್ನದ್ಧತೆ ಈ ಮೂರು ಹಂತಗಳನ್ನು ಒಳಗೊಂಡಿದೆ.
ಮೂಲಸೌಕರ್ಯ ಮಟ್ಟದಲ್ಲಿ ಈ ಐಟಿಐಗಳ ಕ್ಯಾಂಪಸ್‌ಗಳನ್ನು ಇಂಗಾಲ ತಟಸ್ಥಗೊಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮಾಡಲಾಗುವುದು. ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಈ ಐಟಿಯಗಳಲ್ಲಿ ಹಸಿರು ಆಡಿಟ್ ನಡೆಸಿ ಆಯಾ ಕಟ್ಟಡದ ಅವಶ್ಯಕತೆ ತಕ್ಕಂತೆ ಪ್ರತ್ಯೇಕ ಯೋಜನೆ ರೂಪಿಸಲಿದೆ. ಈ ಹಸಿರು ಯೋಜನೆಯು ಮಳೆ ನೀರು ಕೊಯ್ಲು, ಸೌರಶಕ್ತಿ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಗಾರ್ಡನಿಂಗ್ ಮುಂತಾದ ಅಂಶಗಳನ್ನು ಒಳಗೊಳ್ಳಲಿದೆ.
ಇದನ್ನೂ ಓದಿ | Three Soldiers Martyred | ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಮೂವರು ಯೋಧರು ಹುತಾತ್ಮ
ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರಾದ ಶಿವಕುಮಾರ್ ಈ ಬಗ್ಗೆ ಮಾತನಾಡಿದ್ದು, ನಮ್ಮ ಸಂಸ್ಥೆಯು ಹಸಿರು ಐಟಿಐ ಆಗಿ ಪರಿವರ್ತನೆಗೊಳ್ಳುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಸಿರು ವೃತ್ತಿಗಳನ್ನು ಆಯ್ದುಕೊಳ್ಳಲು ಪ್ರೇರಣೆ ನೀಡಲಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಹಸಿರು ಮನೋಭಾವ ಬೆಳೆಸುವುದು ಸಹ ನಮ್ಮ ಉದ್ದೇಶವಾಗಿದೆ. ಮೊದಲಿಗೆ ನಾವು ಸಂಸ್ಥೆಯನ್ನು ಆಡಿಟ್ ಮಾಡಿಸಿ ನಂತರ ಇದನ್ನು ಹೇಗೆ ಹಸಿರು ಐಟಿಐ ಆಗಿ ಪರಿವರ್ತಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಎರಡನೆಯದಾಗಿ ಜ್ಞಾನಗ್ರಹಣ ಮಟ್ಟದಲ್ಲಿ, ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಒಳಗಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಹಸಿರು ಪರಿಹಾರಗಳನ್ನು ರೂಪಿಸಲು ಪ್ರೋತ್ಸಾಹ ನೀಡಲಾಗುವುದು. ಹ್ಯಾಕಥಾನ್, ಕಾರ್ಯಾಗಾರಗಳು, ಸಂವೇದನೆ ರೂಪಿಸುವ ಕಾರ್ಯಕ್ರಮಗಳು ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹಸಿರು ಮಾನಸಿಕತೆ ಬೆಳೆಸಲು ಈ ಯೋಜನೆ ಕಾರ್ಯನಿರ್ವಹಿಸಲಿದೆ.
ಮೂರನೆಯದಾಗಿ, ಹಸಿರು ವೃತ್ತಿಗಳಿಗಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಗುವುದು. ಹೊರಹೊಮ್ಮುತ್ತಿರುವ ಹಸಿರು ರಂಗದಲ್ಲಿ ಪ್ರಸ್ತುತ ಇರುವ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ಅತಿಥಿ ಉಪನ್ಯಾಸಗಳು ಹಾಗೂ ಸಂವಾದಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ. ಉದ್ಯಮದ ಜತೆ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿನ ಬಗ್ಗೆ ಮಾರ್ಗದರ್ಶನ, ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
ಹಸಿರು ಉದ್ದಿಮೆ ಭವಿಷ್ಯದ ಉದ್ದಿಮೆ
ಜಾಗತಿಕವಾಗಿ ಕಾಡುತ್ತಿರುವ ಹವಾಮಾನ ಬದಲಾವಣೆಯ ಬಿಕ್ಕಟ್ಟು ಭವಿಷ್ಯದಲ್ಲಿ ಹಸಿರು ವೃತ್ತಿಗಳ ಬೇಡಿಕೆ ಬಗ್ಗೆ ದಿಕ್ಸೂಚಿಯಾಗಿದೆ. ಈಗಿನ ಐಟಿಐ ವಿದ್ಯಾರ್ಥಿಗಳು ಪಾರಂಪರಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಹಸಿರು ಉದ್ದಿಮೆ ಭವಿಷ್ಯದ ಉದ್ದಿಮೆಯಾಗಲಿದೆ ಎಂದು ಕ್ವೆಸ್ಟ್ ಅಲಯನ್ಸ್‌ನ ಸಿಇಒ ಆಕಾಶ್ ಸೇಥಿ ತಿಳಿಸಿದ್ದಾರೆ. ಯುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಷ್ಟೇ ಅಲ್ಲದೆ ಬದಲಾಗುತ್ತಿರುವ ಭವಿಷ್ಯದ ವೃತ್ತಿ ಬದುಕಿಗೆ ಹೊಂದಿಕೊಳ್ಳುವ ಮತ್ತು ಜಗತ್ತಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಮನೋಭಾವನೆಯನ್ನು ರೂಪಿಸಿಕೊಳ್ಳಬೇಕು. ಐಟಿಐಗಳೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳನ್ನು ಹಸಿರು ಉದ್ದಿಮೆಗೆ ಸಿದ್ಧಪಡಿಸಲು ಸಹಕಾರ ನೀಡುವುದು ನಮ್ಮ ಉದ್ದೇಶ ಎಂದರು.
ಇದನ್ನೂ ಓದಿ | Ajaneesh Loknath | ಪತ್ರ ಬರೆದು ಅಳಲು ತೋಡಿಕೊಂಡ ಅಜನೀಶ್ ಲೋಕನಾಥ್ : ಜೋರಾಯ್ತು ಹಾಸ್ಟೆಲ್ ಹುಡುಗರ ಹಾವಳಿ!