ಗುಬ್ಬಿ: ಚಿಕ್ಕನಾಯಕನಹಳ್ಳಿ ತಾಲೂಕಿನ ಅಮ್ಮನಹಳ್ಳಿ ಕೆರೆಯಲ್ಲಿ ಗರ್ಭಿಣಿಯೊಬ್ಬರ ಶವವೊಂದು ತೇಲಿ ಬಂದಿದೆ. ಈ ಬಗ್ಗೆ ಆಕೆಯ ಕುಟುಂಬಸ್ಥರು ಕೊಲೆ (murder) ಎಂದು ಶಂಕಿಸಿದ್ದು, ಪತಿ ಮೇಲೆ ಆರೋಪ ಮಾಡಿದ್ದಾರೆ.
ಮಧುಶ್ರೀ (25) ಮೃತ ದುರ್ದೈವಿ. ಮಧುಶ್ರೀ ಚಿಕ್ಕನಾಯಕನಹಳ್ಳಿ ತಾಲೂಕು ಅಣೆಕಟ್ಟಿ ಗ್ರಾಮದವರಾಗಿದ್ದಾರೆ. 4 ವರ್ಷಗಳ ಹಿಂದೆ ನಿಟ್ಟೂರು ಹೋಬಳಿ ಅಮ್ಮನಹಳ್ಳಿ ಗ್ರಾಮದ ಶಿಕ್ಷಕ ಯೋಗೀಶ್ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 2 ವರ್ಷದ ಒಂದು ಗಂಡು ಮಗು ಇದೆ. ಈ ವೇಳೆ ಮಧುಶ್ರೀ ಮತ್ತೆ ಗರ್ಭಿಣಿಯಾಗಿದ್ದಾರೆ.
ಇದೇ ವೇಳೆ ಭಾನುವಾರ (ಮಾ.26) ಸಂಜೆ ಸಂಜೆ ಮಧುಶ್ರೀ ತಂದೆ-ತಾಯಿಗೆ ಕರೆ ಮಾಡಿದ ಯೋಗೀಶ್, ಹೆಂಡತಿ ನಾಪತ್ತೆಯಾಗಿದ್ದಾಳೆ. ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಎಂದು ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಮಧುಶ್ರೀ ಪೋಷಕರು ಅಮ್ಮನಹಳ್ಳಿಗೆ ಬಂದು ಹುಡುಕಾಟ ನಡೆಸಿದ್ದಾರೆ. ಅಷ್ಟರಲ್ಲಿ ಮಧುಶ್ರೀ ಶವ ಕೆರೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: SC ST Reservation: ಬೋವಿ, ಲಂಬಾಣಿ, ಕೊರಮ, ಕೊರಚ ಜನಾಂಗದವರೂ ಎಸ್‌ಸಿ ಪಟ್ಟಿಯಲ್ಲೇ ಇರುತ್ತಾರೆ: ಸಿಎಂ ಬೊಮ್ಮಾಯಿ
ಮಧುಶ್ರೀ ಅವರ 2 ವರ್ಷದ ಗಂಡು ಮಗುವೂ ನಾಪತ್ತೆಯಾಗಿದೆ. ಎಲ್ಲಿದೆ? ಏನಾಗಿದೆ ಎಂಬ ಸುಳಿವು ಸಿಗುತ್ತಿಲ್ಲ ಎಂದು ಮಧುಶ್ರೀ ತಂದೆ, ತಾಯಿ ದೂರಿದ್ದಾರೆ. ಯೋಗೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ತಂದೆ ತಾಯಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಗಳ ಸಾವಿಗೆ ಆಕೆಯ ಗಂಡ ಯೋಗೀಶ್ ಕಾರಣನಾಗಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಿಡ್ನಾಪರ್ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ!
ಚಿಕ್ಕಮಗಳೂರು: ಇದ್ದಕ್ಕಿದ್ದಂತೆ ಬಂದು ಎತ್ತಿಕೊಂಡು ಓಡಿದ ಕಿಡ್ನಾಪರ್‌ಗೆ ಅಷ್ಟೇ ಚಾಣಾಕ್ಷತನದಿಂದ ಒಬ್ಬ ಪೋರ ಚಳ್ಳೆಹಣ್ಣು ತಿನ್ನಿಸಿ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಗೆ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಒಬ್ಬ ವ್ಯಕ್ತಿ ಯತ್ನಿಸಿದ್ದಾನೆ. ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಮುನ್ನಡೆದಿದ್ದು, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ಎಸ್ಕೇಪ್ ಆಗಿದ್ದಾನೆ.
ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯಸ್ಫೂರ್ತಿಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದಿರುವ ಈ ಘಟನೆ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ತಕ್ಷಣ ಯಾರ ಗಮನಕ್ಕೂ ಬಂದಿಲ್ಲ. ಅಪಹರಣಕ್ಕೆ ಯತ್ನಿಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯ ಹೊರಗೆ ಆಡುತ್ತಿರುತ್ತಾರೆ. ಮಕ್ಕಳನ್ನು ಹೊರಗೆ ಬಿಡುವ ಮುನ್ನ ಪೋಷಕರು ಹುಷಾರಾಗಿರುವಂತೆ ಈ ಘಟನೆ ಎಚ್ಚರಿಸಿದೆ.
ಸರಣಿ ಅಪಘಾತದಲ್ಲಿ ಬೈಕ್ ಸವಾರ ಮೃತ್ಯು
ಉಡುಪಿಯ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕುಂಭಾಶಿ ಪಾಕಶಾಲಾ ಹೋಟೆಲ್ ಸಮೀಪ ಹೋಂಡಾ ಡಿಯೋ ದ್ವಿಚಕ್ರ ವಾಹನ, ಹ್ಯುಂಡೈ ಗ್ಯಾಂಡ್ ಐ10 ಕಾರು ಹಾಗೂ ಬಸ್‌ನ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ಸಾವಿಗೀಡಾಗಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ಕೊರವಡಿ ಮಾಣಿಮನೆ ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ (28) ಹಾಗೂ ವಿಶ್ಲೇಶ್ ಪೂಜಾರಿ (27) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.