ಬೆಂಗಳೂರು: ರಾಜ್ಯ ಸರ್ಕಾರದ ಸಚಿವರುಗಳು ಹಿಟಾಚಿಯಲ್ಲಿ ಹಣ ಲೂಟಿ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಒತ್ತಾಯಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರ, ಸಿದ್ಧಾರ್ಥ ನಗರ ಕೊಳೆಗೇರಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಮತ್ತಿತರ ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗ್ಗೆ 8ರಿಂದ 12.30ರವರೆಗೆ ದಾಸರಹಳ್ಳಿ ಕ್ಷೇತ್ರದಲ್ಲಿ ಸಂಚಾರ ಮಾಡಿದ ಮಾಜಿ ಸಿಎಂ, 28 ಕ್ಷೇತ್ರಗಳಿಗೆ 15 ವರ್ಷಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂಬುವ ಮಾಹಿತಿ ಪಡೆಯುತ್ತೇನೆ. ಕೆ.ಆರ್. ಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿನಗರ, ಯಶವಂತಪುರ ಸೇರಿ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣ ಲೂಟಿ ಮಾಡುವುದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಭೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರಿಗಾಗಿ ಕೆಲಸ ಮಾಡಲಿ ಎಂದು ಕಿಡಿಕಾರಿದ ಅವರು, ಈ ಸಚಿವರ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಖರ್ಚಾಗಿದೆ ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದರು.
75% ಪರಿಹಾರ ಕೊಡಲು ಆಗ್ರಹ: ಮಳೆಯಿಂದ ನಷ್ಟ ಆಗಿರುವವರಿಗೆ 75% ಪರಿಹಾರ ಕೊಡಬೇಕು. ನನ್ನ ಅಧಿಕಾರಾವಧಿಯಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ₹750 ಕೋಟಿ ನೀಡಿದ್ದೆ. ಆಮೇಲೆ ರಾಜಕೀಯ ಮಾಡಿ ಹಣ ವಾಪಸ್ಸು ಪಡೆದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹತ್ತು ಸಾರಿ ಮನವಿ ಮಾಡಿದರೂ ಅನುದಾನ ಬಿಡುಗಡೆ ಆಗಿಲ್ಲ. ಹತ್ತು ವರ್ಷಗಳ ಕಾಲ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರಾ ಎಂಬುದು ಗೊತ್ತು. ಅದರ ದಾಖಲೆ ತೆಗೆಸಿ ಮಾತನಾಡುತ್ತೇನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಮಗಾರಿ ನಡೆಯುತ್ತಿಲ್ಲ: ದಾಸರಹಳ್ಳಿಯಲ್ಲಿ ರಾಜಕೀಯ ಕಾರಣಕ್ಕೆ ₹30 ಕೋಟಿ ಬಿಡುಗಡೆ ಮಾಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರಕ್ಕೆ ಸಣ್ಣ ಮೊತ್ತ ಎಲ್ಲಿ ಸಾಲುತ್ತದೆ? ರಾಜಕಾಲುವೆಗಳ ದುರಸ್ತಿಗೆ ₹1,600 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ ಕಾಮಗಾರಿ ನಡೆಯುತ್ತಿಲ್ಲ, ವಿಳಂಬಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.
ರಾಜಧಾನಿ ಅಭಿವೃದ್ಧಿ ಮಾಡಿ: ಮೈತ್ರಿ ಸರ್ಕಾರದ ಅವಧಿಯಲ್ಲಿ ಸಭೆ ಮಾಡಲು ಕಾಂಗ್ರೆಸ್ ನಾಯಕರು ಬಿಡಲಿಲ್ಲ. ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಏನು ಅಭಿವೃದ್ಧಿ ಮಾಡಿದೆ? ಈಗ ಬಿಜೆಪಿ ಸರ್ಕಾರ ಇದೆ, ಮೂರು ವರ್ಷಗಳಾಗುತ್ತಾ ಬಂದರೂ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಮಾನ ಮರ್ಯಾದೆ ಇದ್ದರೆ ಬೆಂಗಳೂರು ಅಭಿವೃದ್ಧಿ ಮಾಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಫೋಟೋ ಸೆಷನ್ ಆಗಬಾರದು: ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ಹೆಚ್ಚು ಸಮಸ್ಯೆಗಳಿರುವ ಕ್ಷೇತ್ರಕ್ಕೆ ಸಿಎಂ ಹೋಗಬೇಕು. ಏಳು ಮಂದಿ ವಲಸೆ ಸಚಿವರು ಏನು ಮಾಡ್ತಿದ್ದಾರೆ? ₹1,200 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಸಿಎಂ ಹೇಳ್ತಾರೆ. ಸಚಿವರ ಕ್ಷೇತ್ರಗಳಿಗೆ ಹೋಗುವುದು ಬಿಟ್ಟು ಮೊದಲು ಶಾಸಕರ ಕ್ಷೇತ್ರಕ್ಕೆ ಸಿಎಂ ತೆರಳಲಿ ಎಂದ ಅವರು, ಹಣ ಮಾಡುವುದಕ್ಕೆ ಬೇರೆ ದಾರಿ ಇದೆ, ಹಿಟಾಚಿಯಲ್ಲಿ ಹಣ ಲೂಟಿ ಮಾಡುವುದನ್ನು ನಿಲ್ಲಿಸಿ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಹೆಚ್ಡಿಕೆ ಸಿಎಂ ಆಗಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ
ಎಚ್.ಡಿ. ಕುಮಾರಸ್ವಾಮಿ ಅವರು ಈಗ ಮುಖ್ಯಮಂತ್ರಿ ಆಗಿದ್ದಿದ್ದರೆ ದಾಸರಹಳ್ಳಿ ಕ್ಷೇತ್ರಕ್ಕೆ ಇಂಥ ದುಸ್ಥಿತಿ ಬರುತ್ತಿರಲಿಲ್ಲ ಎಂದು ದಾಸರಹಳ್ಳಿ ಶಾಸಕ ಮಂಜುನಾಥ್ ನೋವು ವ್ಯಕ್ತಪಡಿಸಿದರು. ಹೆಚ್‌ಡಿಕೆ ಮುಖ್ಯಮಂತ್ರಿ ಆಗಿದ್ದ ವೇಳೆ ಕ್ಷೇತ್ರದ ಪ್ರಗತಿಗೆ ₹700 ಕೋಟಿ ಅನುದಾನ ಮಂಜೂರು ಮಾಡಿದ್ದರು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಅನುದಾನ ವಾಪಸ್ ಪಡುಕೊಂಡಿತು. ಅಷ್ಟು ಅನುದಾನ ಕ್ಷೇತ್ರಕ್ಕೆ ಸಿಕ್ಕಿದ್ದರೆ ಕ್ಷೇತ್ರದ ರಾಜಕಾಲುವೆ, ಚರಂಡಿಗಳು ಉತ್ತಮವಾಗಿರುತ್ತಿದ್ದವು, ಕ್ಷೇತ್ರಕ್ಕೆ ಬಿಜೆಪಿ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ ಪ್ರದಕ್ಷಿಣೆ ಸಮಯದಲ್ಲಿ ಮಳೆ ಹಾನಿ ಸಂತ್ರಸ್ತರಿಗೆ ನೆರವು ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಇದ್ದರು.
ಇದನ್ನೂ ಓದಿ | ಹಣ ಇಲ್ಲವೆಂದು JDS ಟಿಕೆಟ್ ಕೈತಪ್ಪಿದೆ: HDK ವಿರುದ್ಧ ಮರಿತಿಬ್ಬೇಗೌಡ ವಾಗ್ದಾಳಿ