Site icon Vistara News

Halal Certification | ಹಲಾಲ್ ಪ್ರಮಾಣಪತ್ರ ನಿಷೇಧ, ಲವ್‌ ಜಿಹಾದ್‌ ತಡೆಗೆ ಕಾಯ್ದೆ ಜಾರಿ ಮಾಡಿ: ಹಿಂದು ಸಂಘಟನೆಗಳ ಮನವಿ

Halal Certification

ಬೆಂಗಳೂರು: ಅನಧಿಕೃತವಾಗಿ ಹಲಾಲ್ ಪ್ರಮಾಣಪತ್ರ (Halal Certification) ಇರುವ ಆಹಾರ ಉತ್ಪನ್ನಗಳ ಮಾರಾಟ ನಿಷೇಧ ಮಾಡಲು ಹಾಗೂ ಲವ್ ಜಿಹಾದ್ ಪ್ರಕರಣಗಳ ತಡೆಗೆ ಲವ್‌ ಜಿಹಾದ್ ವಿರೋಧಿ ಪೊಲೀಸ್ ದಳ ಸ್ಥಾಪಿಸಲು ರಾಜ್ಯ ಸರ್ಕಾರವು ಈ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆ ಜಾರಿ ಮಾಡಬೇಕು ಎಂಬ ಆಗ್ರಹ ಹಿಂದು ಸಂಘಟನೆಗಳಿಂದ ಕೇಳಿಬಂದಿದೆ.

ಈ ನಿಟ್ಟಿನಲ್ಲಿ ಹಿಂದು ಜನಜಾಗೃತಿ ಸಮಿತಿ, ಶ್ರೀರಾಮಸೇನೆ, ದುರ್ಗಾಸೇನೆ, ರಣರಾಗಿಣಿ ಮಹಿಳಾ ಶಾಖೆ, ದುರ್ಗಾ ವಾಹಿನಿ ಸಂಘಟನೆಗಳಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸುರಕ್ಷತೆಗೆ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಂಬ ಅಧಿಕೃತ ಸಂಸ್ಥೆ ಇರುವಾಗ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದು ಸಂವಿಧಾನ ಬಾಹಿರವಾಗಿದೆ. ಹೀಗಾಗಿ ಹಲಾಲ್‌ ಪ್ರಮಾಣಪತ್ರದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗೆ ಉಪಯೋಗ ಮಾಡಲಾಗುತ್ತಿದೆ. ಆದ್ದರಿಂದ ಇದನ್ನು ಕೂಡಲೇ ನಿಷೇಧ ಮಾಡಬೇಕು ಎಂದು ಸಂಘಟನೆಗಳು ಕೋರಿವೆ.

ರಣರಾಗಿಣಿ ಮಹಿಳಾ ಶಾಖೆಯ ಭವ್ಯ ಗೌಡ ಮಾತನಾಡಿ, ಪ್ರಸ್ತುತ ಇಸ್ಲಾಮಿಕ್‌ ಸಂಸ್ಥೆಗಳು ಪ್ರತಿಯೊಂದು ಪದಾರ್ಥ ಮತ್ತು ವಸ್ತುವನ್ನು ಅವರಿಗನುಸಾರವಾಗಿ ಕಾನೂನುಬದ್ಧ ಎಂದರೆ ‘ಹಲಾಲ್’ ಆಗಿರುವುದರ ಬೇಡಿಕೆಯನ್ನು ಮಾಡುತ್ತಿದೆ. ಈ ಬೇಡಿಕೆಯು ಕೇವಲ ಮಾಂಸಕ್ಕಷ್ಟೇ ಸೀಮಿತವಾಗಿರದೆ ಎಲೆಕ್ಟ್ರಾನಿಕ್ ವಸ್ತುಗಳು, ಔಷಧ, ಧಾನ್ಯ, ಹಣ್ಣು, ಸೌಂದರ್ಯವರ್ಧಕಗಳು, ಕಟ್ಟಡ ಕಾಮಗಾರಿ ಇತ್ಯಾದಿ ಉತ್ಪನ್ನಗಳು ಹಲಾಲ್ ದೃಢೀಕೃತವಾಗಿರಬೇಕು ಎಂಬ ಬೇಡಿಕೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Dress code in temple | ಮುರ್ಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಕ್ಕೆ ಹಿಂದು ಸಂಘಟನೆಗಳ ಮನವಿ

ಮೆಕ್‌ಡೊನಾಲ್ಡ್, ಕೆಎಫ್‌ಸಿಯಂತಹ ಬಹುರಾಷ್ಟ್ರೀಯ ಕಂಪನಿಗಳು 100 ಪ್ರತಿಶತ ಹಲಾಲ್ ಪದಾರ್ಥವನ್ನು ಮಾರಾಟ ಮಾಡಿ ಭಾರತದಲ್ಲಿನ ಬಹುಸಂಖ್ಯಾತ ಹಿಂದು ಧರ್ಮೀಯರನ್ನು ಅವಮಾನ ಮಾಡುತ್ತಿವೆ. ಇಸ್ಲಾಂ ಧರ್ಮದ ಹಲಾಲ್ ವ್ಯವಸ್ಥೆಯನ್ನು ಇಸ್ಲಾಮೇತರ ಸಮಾಜದವರ ಮೇಲೆ ಹೇರುವುದು ಸಾಂವಿಧಾನಿಕ, ಧಾರ್ಮಿಕ ಹಕ್ಕುಗಳ ವಿರುದ್ಧವಾಗಿದೆ. ಆದ್ದರಿಂದ ಧಾರ್ಮಿಕ ಭೇದಭಾವ ಮಾಡುವ ಹಲಾಲ್ ಪ್ರಮಾಣ ಪತ್ರ ಕೊಡುವುದಕ್ಕೆ ನಿಷೇಧ ಹೇರಬೇಕು ಎಂದು ಭವ್ಯಾ ಒತ್ತಾಯಿಸಿದರು.

ಪ್ರೇಮದ ಹೆಸರಿನಲ್ಲಿ ಹಿಂದು ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ಲವ್ ಜಿಹಾದ್ ಪ್ರಕರಣಗಳಲ್ಲಿ ಪಿಎಫ್‌ಐನ ಶಾಹಿನ್ ಗ್ಯಾಂಗ್ ಎಂಬ ಯುವತಿಯರ ಸಂಘಟನೆ, ಮದರಸಾ ಮತ್ತು ಮಸೀದಿಗಳ ಮೌಲ್ವಿಗಳು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ತಕ್ಷಣವೇ ನಿಷೇಧಿಸಬೇಕು’ ಇದೆಲ್ಲದಕ್ಕೆ ಪರಿಹಾರವಾಗಿ ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳದ ಸ್ಥಾಪನೆ ಮಾಡಬೇಕು ಎಂದು ಭವ್ಯಾ ಗೌಡ ಆಗ್ರಹಿಸಿದರು.

ಮನವಿಗೆ ಸ್ಪಂದಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಈ ವಿಷಯವನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ. ಲವ್ ಜಿಹಾದ್ ವಿರೋಧಿ ಕಠಿಣ ಕಾನೂನು ಜಾರಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂಬುದಾಗಿ ಭವ್ಯಾಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ದುರ್ಗಾ ಸೇನೆಯ ನಂದಿನಿ ರಾಜ್, ಹಿಂದು ಜನಜಾಗೃತಿ ಸಮಿತಿಯ ನವೀನ ಗೌಡ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ | Basavaraja Bommai | ಮೂಢನಂಬಿಕೆ ನಂಬಲ್ಲ, ಚಾಮರಾಜ ನಗರ ಭೇಟಿಯಿಂದ ಶುಭವಾಗುತ್ತೆ ಎಂದ ಬೊಮ್ಮಾಯಿ

Exit mobile version