Site icon Vistara News

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ!

Yoga Mandir inauguration

ರಿಪ್ಪನ್ ಪೇಟೆ: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಜನಪರ ಹೋರಾಟಗಾರರೊಬ್ಬರು ಅರೆ ಬೆತ್ತಲೆಯಾಗಿ ಉದ್ಘಾಟನೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದಿಂದ 6 ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಯೋಗ ಮಂದಿರವನ್ನು ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅರೆ ಬೆತ್ತಲೆಯಾಗಿ ಉದ್ಘಾಟಿಸಿದರು. ನಂತರ ಸಾರ್ವಜನಿಕರೊಂದಿಗೆ ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಟಿ.ಆರ್. ಕೃಷ್ಣಪ್ಪ ಅವರು, ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡ ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳಾದರೂ ಸಹ ಉದ್ಘಾಟನೆಗೊಳ್ಳದೆ ಸಾರ್ವಜನಿಕರಿಗೆ ಬಳಕೆಯಾಗುತ್ತಿರಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ಹಲವಾರು ಬಾರಿ ಮನವಿ‌ ಮಾಡಿದರೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳ ಬಳಿಯಿಂದ ಕಟ್ಟಡದ ಬೀಗದ ಕೈ ಪಡೆದು ನಾನೇ ಉದ್ಘಾಟಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | Shivamogga News: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಬೇಲಿ ನಿರ್ಮಿಸುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಒತ್ತಾಯ

ಯಾವುದೇ ಚುನಾಯಿತ ಪ್ರತಿನಿಧಿಗಳಿಗಳು, ಅಧಿಕಾರಿಗಳನ್ನು ಅವಹೇಳನ ಮಾಡುವ ಉದ್ದೇಶದಿಂದ ನಾನು ಈ ಕೆಲಸ ಮಾಡದೇ, ಸಾರ್ವಜನಿಕರಿಗೆ ಕಟ್ಟಡ ಉಪಯೋಗವಾಗಲಿ ಎಂಬ ಉದ್ದೇಶದಿಂದ ಉದ್ಘಾಟನೆ ಮಾಡಿದ್ದೇನೆ. ಸರ್ಕಾರಿ ಸವಲತ್ತುಗಳು ಸಾರ್ವಜನಿಕರಿಗೆ ಯಾವುದೇ ಅಡೆತಡೆಗಳಿಲ್ಲದೇ ನೇರವಾಗಿ ತಲುಪುವಂತೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಪ್ರತಿ ನಿತ್ಯ ಬೆಳಗ್ಗೆ 6 ಗಂಟೆಯಿಂದ ಯೋಗ ಮಂದಿರವು ತೆರೆಯಲಿದ್ದು, ಪಟ್ಟಣದ ಯೋಗ ಪ್ರೀಯರು ಸದೃಢ ಆರೋಗ್ಯವನ್ನು ಬಯಸುವವರು ಯೋಗ ಮಂದಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮನವಿ‌ ಮಾಡಿದರು.

ಮಳೆಗೆ ಸೋರುತ್ತಿರುವ ಮಹಾಗಣಪತಿ ದೇವಸ್ಥಾನ; ತುರ್ತು ದುರಸ್ತಿ ಕೈಗೊಳ್ಳಲು ಮನವಿ

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಗಣಪತಿ ದೇವಸ್ಥಾನ (Mahaganapati temple) ಮಳೆಯಿಂದ (rain) ಸಂಪೂರ್ಣ ಸೋರುತ್ತಿದ್ದು, (Leaking), ದೇವಸ್ಥಾನದ ಕಟ್ಟಡ ರಕ್ಷಣೆ ಮಾಡಲು ಭಕ್ತಾದಿಗಳು ಟಾರ್ಪಲ್ ಹೊದೆಸುವ ಮೂಲಕ ಆಡಳಿತದ ಗಮನ ಸೆಳೆದಿದ್ದಾರೆ.

ದೇವಸ್ಥಾನ ಸೋರುತ್ತಿರುವ ಕುರಿತು ಮಹಾಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಉಪವಿಭಾಗಾಧಿಕಾರಿಗಳಿಗೆ ದೇವಸ್ಥಾನವನ್ನು ತುರ್ತು ರಿಪೇರಿ ಮಾಡಲು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Poverty in Uttar Pradesh : ಉತ್ತರಪ್ರದೇಶಲ್ಲಿ 5 ವರ್ಷಗಳಲ್ಲಿ 3.4 ಕೋಟಿ ಮಂದಿ ಬಡತನದಿಂದ ಪಾರು

ಇತಿಹಾಸ ಪ್ರಸಿದ್ಧವಾದ ಸಾಗರದ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರಗೊಂಡ ಮೂರ್ನಾಲ್ಕು ವರ್ಷದಲ್ಲಿ ಸಂಪೂರ್ಣ ಸೋರುತ್ತಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ. ದೇವಸ್ಥಾನದ ಮುಖಮಂಟಪ, ಘಂಟಾ ಮಂಟಪ ಸಂಪೂರ್ಣ ಸೋರುತ್ತಿದ್ದು, ಭಕ್ತಾದಿಗಳಿಗೆ ದೇವಸ್ಥಾನದೊಳಗೆ ಬರಲು ಭಯಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಸೋರಿಕೆಯಾದ ನೀರು ಭಕ್ತರು, ದೇವರ ದರ್ಶನ ಪಡೆಯುವ ಜಾಗದಲ್ಲಿ ನಿಲ್ಲುತ್ತಿದೆ. ನೀರು ವಿದ್ಯುತ್ ತಂತಿಗಳಿಗೆ ತಗುಲಿ ಆಧಾರಕ್ಕಾಗಿ ಕೊಟ್ಟ ಸ್ಟೀಲ್ ಪೈಪ್ ಹಾಗೂ ಸ್ಟೀಲ್ ಗೇಟ್‍ಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತಿದೆ. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಸಹ ಆಗುತ್ತಿಲ್ಲ.

ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!

ಶ್ರಾವಣ ಮಾಸದಲ್ಲಿ ಹೆಚ್ಚಿನ ಹಬ್ಬಹರಿದಿನಗಳು ಇದ್ದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಈಗಾಗಲೆ ಸಾಕಷ್ಟು ಭಕ್ತರು ಕರೆಂಟ್ ಶಾಕ್‌ ಹೊಡೆಸಿಕೊಂಡಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Exit mobile version