Site icon Vistara News

Hampi Festival | ಕೋವಿಡ್‌ ಆತಂಕದ ನಡುವೆಯೂ ಹಂಪಿ ಉತ್ಸವಕ್ಕೆ ಸಿಎಂ ಗ್ರೀನ್‌ ಸಿಗ್ನಲ್‌; ಜನವರಿ 27, 28, 29ಕ್ಕೆ ಫಿಕ್ಸ್‌

hampi utsav

ವಿಜಯನಗರ: ಕಳೆದೆರಡು ವರ್ಷ ಕೊರೊನಾದಿಂದ ಮಂಕಾಗಿದ್ದ ಹಂಪಿ ಉತ್ಸವಕ್ಕೆ (Hampi Festival) ಕೊನೆಗೂ ದಿನಾಂಕ ನಿಗದಿಯಾಗಿದೆ. ರಾಜ್ಯ ಸರ್ಕಾರ ಅಳೆದು ತೂಗಿ ನಿರ್ಧಾರ ತೆಗೆದುಕೊಂಡಿದ್ದು, ಜನವರಿ ಕೊನೆಯ ವಾರದಲ್ಲಿ ಮೂರು ದಿನ ಉತ್ಸವ ನಡೆಸಲು ಈ ಹಿಂದೆ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದು, ಜನವರಿ 27, 28 ಹಾಗೂ 29ಕ್ಕೆ ನಡೆಯಲಿದೆ.

ರೂಪಾಂತರಿ ಕೊರೊನಾ ಆತಂಕದಿಂದ ಮುಂಜಾಗ್ರತಾ ವಹಿಸಿ ಉತ್ಸವ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಉತ್ಸವಕ್ಕೆ ರೂಪಾಂತರಿ ವೈರಸ್ BF.7 ಆತಂಕ ಎದುರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟೇಶ್‌ ಬಾಬು ಪ್ರತಿಕ್ರಿಯೆ ನೀಡಿದ್ದು, ಹಂಪಿಗೆ ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಜತೆಗೆ ಹಂಪಿ ಉತ್ಸವ ನಡೆಸಲೆಂದೇ ಸರ್ಕಾರ ಕೋವಿಡ್‌ನ ಕೆಲವು ರೂಲ್ಸ್ ಮಾಡಲಾಗಿದೆ. ಉತ್ಸವಕ್ಕೆ ಬರುವ ಪ್ರವಾಸಿಗರು, ವಿದೇಶಿಗರು ಹಾಗೂ ಮಕ್ಕಳು ಸೇರಿದಂತೆ ಎಲ್ಲರ ಮೇಲೂ ನಿಗಾ ವಹಿಸಲಾಗುವುದು. ಈ ಬಾರಿ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುತ್ತಿದ್ದು, ಸೂಚನೆಯಂತೆ ಸಿದ್ಧತೆಗಳನ್ನು ಚುರುಕುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೊಸಪೇಟೆ, ಕಮಲಾಪುರ, ಹಂಪಿ ಎಲ್ಲ ಸ್ಮಾರಕಗಳಿಗೂ ವಿಶೇಷ ದೀಪಾಲಂಕಾರ ಮಾಡಲಾಗುವುದು. ಹಂಪಿ ಉತ್ಸವದಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಸುಮಾರು 1,036 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗಿದ್ದು, ಇದುವರೆಗೂ ಅವಕಾಶ ಸಿಗದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ಕಾನೂನು ಸುವ್ಯವಸ್ಥೆಗೆ ಅಗತ್ಯ ತಯಾರಿ ಮಾಡಲಾಗಿದ್ದು, ಹಂಪಿ ಪ್ರದೇಶದಲ್ಲಿ ಸಂಪೂರ್ಣ ಸಿಸಿ ಟಿವಿ ಅಳವಡಿಕೆ, ಹಂಪಿಗೆ ಹೋಗುವ ಮಾರ್ಗವಾದ ಕಡ್ಡಿರಾಂಪುರ ಸ್ವಾಗತ ಕಮಾನಿನಿಂದ ಕಡ್ಡಿರಾಂಪೂರ, ಕೃಷ್ಣಾ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಮಾರ್ಗದ ಮೂಲಕ ಕಮಲಾಪುರದವರೆಗೆ ಏಕಮುಖ ಮಾರ್ಗ ಸಂಚಾರ ವ್ಯವಸ್ಥೆ ಮಾಡುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಹೇಳಿದ್ದಾರೆ.

ಹಂಪಿ ಉತ್ಸವಕ್ಕೆ ರಾಜ್ಯ, ರಾಷ್ಟ್ರ ಮಟ್ಟದ ಕಲಾ ತಂಡಗಳಿಂದ ಹೊಸಪೇಟೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ಕಾರ್ಯಕ್ರಮ, ತುಂಗಾನದಿಯ ತಟದಲ್ಲಿ ತುಂಗಾರತಿ, ವಿಜಯನಗರ ವೈಭವದ ಕುರಿತು ಸುಮಾರು 300 ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಹಂಪಿ ಬೈ ಸ್ಕೈ, ವಿಭಿನ್ನ ರೀತಿಯ ಫಲಪುಷ್ಪ ಪ್ರದರ್ಶನ, ಅಶ್ವದಳ ಪ್ರದರ್ಶನ, ಕುಸ್ತಿ ಹಾಗೂ ಇತರೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಮುಂದಾಗಿದೆ.

ಇದನ್ನೂ ಓದಿ | Makeup less beauty | ಮೇಕಪ್‌ ಇಲ್ಲದೇ ʻಸ್ಮಾರ್ಟ್‌ ಆ್ಯಂಡ್‌ ಬ್ಯೂಟಿಫುಲ್‌ʼ ಆಗಿ ಕಾಣಲು 20 ಸೂತ್ರಗಳು!

Exit mobile version