Site icon Vistara News

Hampi Utsav 2023: ಮೊದಲ ದಿನದ ಆತಂಕ ಕಳಚಿ ಜನೋತ್ಸವವಾದ ಹಂಪಿ ಉತ್ಸವ; 2ನೇ ದಿನ ಅಸಂಖ್ಯ ಜನಾಗಮನ

Hampi Utsav 2023

#image_title

| ಶಶಿಧರ ಮೇಟಿ, ಬಳ್ಳಾರಿ
ಮೊದಲ ದಿನ ಜನರಿಲ್ಲದೆ ಬಣಗುಟ್ಟಿದ ಹಂಪಿ ಉತ್ಸವ (Hampi Utsav 2023) ಎರಡನೇ ದಿನವಾದ ಶನಿವಾರ ನಿರೀಕ್ಷಿತ ಜನರು ಆಗಮಿಸುವ ಮೂಲಕ ಜನೋತ್ಸವವಾಗಿ ಮಾರ್ಪಟ್ಟಿತು. ವಿನಾಕಾರಣದ ತಕರಾರಿಗೆ ತಡೆ, ವಾಹನಗಳ ಮುಕ್ತ ಪ್ರವೇಶ, ಉತ್ಸವ ಪ್ರಿಯರಿಗಾಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ವಿಶ್ವ ಪಾರಂಪರಿಕ ತಾಣದಲ್ಲಿ ನಡೆಯುತ್ತಿರುವ ಹಂಪಿ ಉತ್ಸವದಿಂದ ದೂರ ಉಳಿದಿದ್ದ ಜನರು ಹಂಪಿಯ ಕಡೆ ಹೆಜ್ಜೆ ಹಾಕಿದ ದೃಶ್ಯಗಳು ಕಂಡುಬಂತು.

ಕೋಟ್ಯಂತರ ರೂಪಾಯಿ ಹಣ ಸುರಿದು ಹಂಪಿ ಉತ್ಸವ ಮಾಡಿದರೂ, ಮೊದಲ ದಿನ ಜನರಿಲ್ಲದೆ ಬಿಕೋ ಎನಿಸಿತು. ಹೀಗಾಗಿ ಹಂಪಿ ಉತ್ಸವ ವ್ಯವಸ್ಥೆಯಲ್ಲಾಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎರಡನೇ ಯಶಸ್ವಿಯಾದಂತೆ ಕಂಡುಬಂತು.

#image_title

ಹಂಪಿ ಉತ್ಸವ ನೋಡುಗರಿಗೆ ಮುಕ್ತ ಮುಕ್ತ

ಉತ್ಸವಕ್ಕೆ ಜನರು ಮುಕ್ತವಾಗಿ ಆಗಮಿಸುವಂತಾಗಲು ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಿದ್ದರು. ಕಾರು, ಟ್ರಕ್ಸ್‌, ಆಟೋ, ದ್ವಿಚಕ್ರ ವಾಹನಗಳು ಸೇರಿ ಇತರೆ ವಾಹನಗಳೊಂದಿಗೆ ಉತ್ಸವಕ್ಕೆ ಬರುವ ಜನರನ್ನು ತಡೆಯೊಡ್ಡದೆ ಮುಕ್ತ ಪ್ರವೇಶ ನೀಡಲಾಯಿತು. ಹೊಸಪೇಟೆಯಿಂದ ಹಂಪಿಗೆ ಬರುವ ಉತ್ಸವ ಪ್ರಿಯರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಯಿತು. ಹತ್ತಾರು ಬಸ್‌ಗಳು ಉತ್ಸವ ಜನರನ್ನು ಹೊತ್ತು ಉಚಿತ ಓಡಾಟ ಆರಂಭಿಸಿದವು.

ಪಾಸ್ ನಿರ್ಬಂಧ ತೆರವಿಗೆ ಜನರ ಉತ್ಸಾಹ

ಉತ್ಸವದ ವೇದಿಕೆಗಳಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ ಸವಿಯಲು ಮುಂಭಾಗದ ಚೇರ್‌ಗಳಿಗೆ ಪಾಸ್‌ಗಳಿದ್ದವರಿಗೆ ಮಾತ್ರ ಪ್ರವೇಶ ಎಂಬ ನಿರ್ಬಂಧ ತೆರವುಗೊಳಿಸಿದ್ದರಿಂದ ಹಂಪಿಯ ಕಡೆ ಸಾವಿರಾರು ಸಂಖ್ಯೆಯಲ್ಲಿ ಜನರು ಹರಿದು ಬರಲು ಕಾರಣವಾಯಿತು. ಮೊದಲು ಬಂದವರಿಗೆ ವೇದಿಕೆಯ ಮುಂಭಾಗದ ಆದ್ಯತೆಯ ನಿಯಮ ಹೆಚ್ಚು ಫಲ ನೀಡಿತು. ವಿವಿಐಪಿ ಬಿಟ್ಟಂತೆ ಎಲ್ಲಾ ಕಡೆ ಜನರಿಗೆ ಮುಕ್ತ ಅವಕಾಶ. ಉತ್ಸವ ಅಂಗವಾಗಿ ಜರುಗಿದ ವಿವಿಧ ಕ್ರೀಡೆಗಳು, ಕುಸ್ತಿ ಪಂದ್ಯಾವಳಿಗಳು, ಕೃಷಿ, ಕರಕುಶಲ, ಕೈಗಾರಿಕೆ, ಪುಸ್ತಕ ಪ್ರದರ್ಶನ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಜಲಕ್ರೀಡೆ, ಗ್ರಾಮೀಣ ಕ್ರೀಡೆಗಳಲ್ಲಿ ಜನರ ಭಾಗವಹಿಸುವಿಕೆ ಶನಿವಾರ ಹೆಚ್ಚಾಗಿತ್ತು.

ವೇದಿಕೆಗಳ ಮುಂದೆ ಕಾಣಿಸಿಕೊಂಡ ಜನಸ್ತೋಮ

ಹಂಪಿಯ ಶ್ರೀ ಹಂಪಿವಿರುಪಾಕ್ಷೇಶ್ವರ ದೇವಸ್ಥಾನ ಆವರಣದ ವೇದಿಕೆಯಲ್ಲಿ ಜರುಗಿದ ಕವಿಗೋಷ್ಠಿ ಹೆಚ್ಚು ಗಮನ ಸೆಳೆಯಿತು. ನಾಡಿನ ಖ್ಯಾತ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿ ಕಾವ್ಯ ವಾಚಿಸಿದರು. ಕಾವ್ಯ ಕೇಳುಗ ಮನಸ್ಸುಗಳಿಗೆ ಬರವಿರಲಿಲ್ಲ. ನೂರಾರು ಜನರು ಗೋಷ್ಠಿಯಲ್ಲಿ ಭಾಗಿಯಾಗಿ ಕವಿಗಳ ಕಾವ್ಯಕ್ಕೆ ಕಿವಿಯಾದರು.

ಮುಖ್ಯವೇದಿಕೆಗಳಲ್ಲಿ ಕಂಡು ಬಂದ ಜನಸ್ತೋಮ ಉಳಿದ ವೇದಿಕೆಗಳಲ್ಲೂ ಸಂಗೀತಾಸಕ್ತ ಜನರು ಕಂಡು ಬಂದರು. ಪೊಲೀಸರ ಕಿರಿಕಿರಿಯಿಂದಾಗಿಯೇ ಜನರು ಉತ್ಸವಕ್ಕೆ ಬರುತ್ತಿಲ್ಲ ಎಂಬ ಆರೋಪದಿಂದಾಗಿ ಉತ್ಸವದ ಎರಡನೇ ದಿನ ಪೊಲೀಸರ ಕೆಲಸವನ್ನು ಕಡಿಮೆಗೊಳಿಸಿತು.

ದುಡ್ಡು ಮುಖ್ಯವಲ್ಲ, ಉತ್ಸಾಹ ಮುಖ್ಯ!

ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಹಂಪಿ ಬೈಸ್ಕೈಗೆ ವ್ಯವಸ್ಥೆ ಮಾಡಲಾಗಿತ್ತು. ಆಗಸದಿಂದ ಹಂಪಿ ನೋಡಲು ಶನಿವಾರವೂ ಜನರು ಮುಗಿಬಿದ್ದರು. ಲೋಹದ ಹಕ್ಕಿಯಲ್ಲಿ ಹಾರಾಟ ದುಬಾರಿ ಎನಿಸಿದರೂ ಜನರ ಉತ್ಸಾಹಕ್ಕೆ ಮಾತ್ರ ಕೊರತೆ ಇರಲಿಲ್ಲ‌‌. ಮಹಿಳೆಯರು, ಮಕ್ಕಳು ಹೆಲಿಕಾಪ್ಟರ್‌ನಲ್ಲಿ ಕುಳಿತು ಆಗಸದಿಂದ ಹಂಪಿ ನೋಡಲು ಉತ್ಸುಕರಾಗಿದ್ದುದು ಕಂಡು ಬಂತು. ಹಂಪಿ ಉತ್ಸವದ ಎರಡನೇ ದಿನ ಅಧಿಕಾರಿಗಳ ಮುಖದಲ್ಲಿ ನಿರಾಳ ಭಾವವಿದ್ದರೆ, ಜನರ ಮುಖದಲ್ಲಿ ಉತ್ಸಾಹ ಮನೆ ಮಾಡಿತ್ತು.

ಇದನ್ನೂ ಓದಿ | Hampi Utsav 2023: ಹಂಪಿ ಉತ್ಸವದಲ್ಲಿ 2ನೇ ದಿನ ಗಮನ ಸೆಳೆದ ಕುಸ್ತಿ ಕಾಳಗ; 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

Exit mobile version