ವಿಜಯನಗರ: ಹಂಪಿ ಉತ್ಸವದ (Hampi Utsav 2023) ಎರಡನೇ ದಿನವಾದ ಶನಿವಾರ ದೇಸಿ ಕ್ರೀಡೆಗಳ ಆರ್ಭಟ ಜನರ ಹುಬ್ಬೇರಿಸುವಂತೆ ಮಾಡಿದ್ದು, ಪುರುಷ ಹಾಗೂ ಮಹಿಳಾ ಜಟ್ಟಿಗಳ ಕುಸ್ತಿ ಕಾಳಗ ಕುಸ್ತಿ ಪ್ರೇಮಿಗಳ ಕಣ್ಣಿಗೆ ಹಬ್ಬದಂತಿತ್ತು. ಹೊಸಪೇಟೆ ಮಲಪನಗುಡಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಪುರುಷ ಮತ್ತು ಮಹಿಳೆ ಕುಸ್ತಿ ಪಂದ್ಯಾವಳಿಗಳಲ್ಲಿ ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ 100ಕ್ಕೂ ಹೆಚ್ಚು ಪಟುಗಳು ಭಾಗಿಯಾಗಿದ್ದರು. ಪಂದ್ಯಾವಳಿಗೆ ಪ್ರವಾಸೋದ್ಯಮ ಸಚಿವ ಸಚಿವ ಆನಂದ ಸಿಂಗ್ ಚಾಲನೆ ನೀಡಿದರು.
ಉತ್ಸವಕ್ಕೆ ಮೆರುಗು ನೀಡಲು ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಕುಸ್ತಿಯ ಮದಗಜಗಳ ಕಾಳಗ ಕಣ್ತುಂಬಿಕೊಳ್ಳುಲು ವಿಜಯನಗರ ಜಿಲ್ಲೆ ಸೇರಿ ಸುತ್ತಮುತ್ತಲಿನ ಜನ ಮೈದಾನಕ್ಕೆ ಬಂದಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿಯರ ಕುಸ್ತಿಗೆ ಅವಕಾಶ ನೀಡಲಾಗಿತ್ತು. ಒಂದೊಂದು ಜೋಡಿ ಕಾದಾಟಕ್ಕೆ ಕ್ರೀಡಾ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಸುರಿಮಳೆ ಸುರಿಸಿದರು. 100ಕ್ಕೂ ಹೆಚ್ಚು ಪಟುಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಐಕಾನ್‌ಗಳು ಎರಡೆರಡು ಬಾರಿ ಹುಟ್ಟುತ್ತಾರೆ! ಆಶ್ಚರ್ಯ ಆಯ್ತಾ? ಈ ಉದಾಹರಣೆ ನೋಡಿ!
ಕುಸ್ತಿ ಪಂದ್ಯಕ್ಕಾಗಿ ಮಡ್ಡಿ ಮಣ್ಣು ಮಿಶ್ರಿತ ಅಖಾಡ ಸಿದ್ಧ ಮಾಡಲಾಗಿತ್ತು. ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರು, ಜಟ್ಟಿಗಳ ಸೆಣಸಾಟ ನೋಡಲು ಮುಗಿಬಿದ್ದರು. 5 ತಾಸುಗಳ ಅಧಿಕ ಕಾಲ ನಡೆದ ಕುಸ್ತಿಯಲ್ಲಿ ಭಾಗಿಯಾಗಲು ದಾವಣಗೆರೆ, ಬೆಳಗಾವಿ, ಗದಗ ಸೇರಿ ವಿವಿಧ ಜಿಲ್ಲೆಯಿಂದ ಕುಸ್ತಿ ಪಟುಗಳು ಆಗಮಿಸಿದ್ದರು.
ಮೂರು ದಿನಗಳ ಕಾಲದ ಹಂಪಿ ಉತ್ಸವಕ್ಕೆ ದೇಶಿ ಕ್ರೀಡೆಗಳು ಮೆರುಗು ತರುತ್ತಿವೆ. ಕೊರೊನಾ ಬಳಿಕ ನಡೆಯುತ್ತಿರುವ ಉತ್ಸವದಲ್ಲಿ ಕ್ರೀಡೆಗೆ ವ್ಯಾಪಕ ಉತ್ಸಾಹ ಕಂಡುಬರುತ್ತಿದೆ. ಹಂಪಿ ಕುಸ್ತಿ ಪಂದ್ಯ ಆಯೋಜನೆ ಮಾಡಿರುವುದು ಬಹಳ ಖುಷಿ ತಂದಿದೆ. 7 ವರ್ಷದಿಂದ ಕುಸ್ತಿ ತರಬೇತಿ ಪಡೆಯುತ್ತಿದ್ದೇವೆ. ಇದು ನಮಗೆ ಅದ್ಭುತ ವೇದಿಕೆ ಎಂದು ಕುಸ್ತಿಪಟುಗಳು ಪ್ರತಿಕ್ರಿಯೆ ನೀಡಿದ್ದಾರೆ.