Site icon Vistara News

Hampi Utsav 2023: ಮೂರು ದಿನಗಳ ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ; ಸಾಂಸ್ಕೃತಿಕ ರಸದೌತಣ ಉಣಬಡಿಸಿದ ಉತ್ಸವ

Hampi Utsav 2023

#image_title

| ವಿಶೇಷ ವರದಿ, ಬಳ್ಳಾರಿ
ಮೂರು ದಿನಗಳ ಬಾಲಿವುಡ್, ಸ್ಯಾಂಡಲ್ ವುಡ್ ಗಾಯಕರು ಸೇರಿದಂತೆ ನಾಲ್ಕು ವೇದಿಕೆಯಲ್ಲಿ ಮೈಮನ ಸೆಳೆಯುವ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಸಂಭ್ರಮದ ಹಂಪಿ ಉತ್ಸವಕ್ಕೆ (Hampi Utsav 2023) ಭಾನುವಾರ ಸಂಜೆ ವೈಭವ ಮತ್ತು ವರ್ಣರಂಜಿತ ತೆರೆ ಬಿತ್ತು.

ಆರಂಭದ ದಿನ ಕೊಂಚ ನಿರುತ್ಸಾಹ ಬಿಟ್ಟರೆ ಎರಡು ದಿನಗಳ ನಾಲ್ಕು ವೇದಿಕೆಯ ಮುಂದೆ ಕಿಕ್ಕಿರಿದು ಜನಸ್ತೋಮ ಸೇರಿತ್ತು. ಮೊದಲ ದಿನ ಅರ್ಜುನ್ ಜನ್ಯ ಅವರ ತಂಡ , ಎರಡನನೇ ದಿನ ಬಾಲಿವುಡ್ ಅರ್ಮಾನ್ ಮಲ್ಲಿಕ್ ಮತ್ತು ತಂಡ, ಕೊನೆಯ ದಿನ ವಿಜಯ ಪ್ರಕಾಶ್ ಮತ್ತು ಅನನ್ಯ ಭಟ್ ಅವರ ತಂಡ, ಬಾಲಿವುಡ್ ಕೈಲಾಸ್ ಕೇರ್ ತಂಡದ ರಸ ಮಂಜರಿ ಕಾರ್ಯಕ್ರಮ ಎಲ್ಲರ ಮನಸೂರೆ ಗೊಂಡಿತ್ತು.

#image_title

ತೆರೆದುಕೊಂಡ ಸಾಂಸ್ಕೃತಿಕ ವೈಭವ

ಹಂಪಿಯ ಗಾಯತ್ರಿ ಪೀಠ, ಸಾಸಿವೆಕಾಳು ಗಣಪ ಎದುರು ಬಸವಣ್ಣ ವೇದಿಕೆ, ವಿರುಪಾಕ್ಷ ದೇವಸ್ಥಾನ ಆವರಣ ವೇದಿಕೆಯಲ್ಲಿ ಮೂರು ದಿನಗಳಕಾಲ ಸಂಗೀತ, ನೃತ್ಯ‌, ಭರತನಾಟ್ಯ, ಕವಿಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ವೈಭವದ ಲೋಕವೇ ತೆರೆದುಕೊಂಡಿತ್ತು. ಸಾವಿರಾರು ಜನರು ಕಾರ್ಯಕ್ರಮಗಳ ಸವಿಯನ್ನು ಸಂಭ್ರಮದಿಂದ ಸವಿಸಿದರು.

ಮನ ಸೆಳೆದ ಹಂಪಿ ಉತ್ಸವ

ಫಲಪುಷ್ಪ ಪ್ರದರ್ಶನ, ಮರಳು‌ ಚಿತ್ರ, ಕುಸ್ತಿ, ಗ್ರಾಮೀಣ ಕ್ರೀಡೆ, ಹಂಪಿ ಬೈ ಸ್ಕೈ, ಧ್ವನಿ ಬೆಳಕು ಕಾರ್ಯಕ್ರಮವು ಜನರನ್ನು ಹಂಪಿಯತ್ತ ಕೈ ಬೀಸಿ ಕರೆಯುವಂತಿತ್ತು.

ಮುಂದಿನ ವರ್ಷ ಅದ್ಧೂರಿ ಉತ್ಸವ

ಮುಂದಿನ ವರ್ಷ ಹಂಪಿ ಉತ್ಸವ ಅತ್ಯಂತ ಅದ್ಧೂರಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ವರ್ಷ ಉತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ತಿಳಿಸಿದರು.

ಹಂಪಿ ಉತ್ಸವಕ್ಕೆ ನಿರ್ದಿಷ್ಟ ದಿನಾಂಕ

ಹಂಪಿ ಉತ್ಸವದ ಗಾಯತ್ರಿ ಪೀಠ ವೇದಿಕೆಯಲ್ಲಿ ಭಾನುವಾರ ಸಂಜೆ ಜರುಗಿದ ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಆನಂದ್‌ ಸಿಂಗ್ ಅವರು, ಹಿರಿಯ ರಾಜಕೀಯ ಮುತ್ಸದ್ಧಿ ದಿ.ಎಂ.ಪಿ.ಪ್ರಕಾಶ್ ಅವರು ಹಂಪಿ ಉತ್ಸವವನ್ನು ಆರಂಭಿಸಿದರು.‌ ನಂತರ ನಾವು ಉತ್ಸವವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಹಿಂದೆ ನವೆಂಬರ್ ತಿಂಗಳಲ್ಲಿ ಉತ್ಸವ ನಡೆಯುತ್ತಿತ್ತು. ಉತ್ಸವಕ್ಕೆ ನಿರ್ದಿಷ್ಟ ದಿನಾಂಕ ಗೊತ್ತು ಮಾಡಬೇಕಾಗಿದೆ. ಮೈಸೂರು ದಸರಾದ ನವರಾತ್ರಿ ಬಳಿಕ ಹಂಪಿ ಉತ್ಸವ ಆಚರಿಸುವ ಕುರಿತು ಯೋಚಿಸಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಹಿರಿಯರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಸ್ಕೃತಿ ಕಾಪಾಡಲು ಉತ್ಸವ ಬೇಕು

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು, ಮಾತನಾಡಿ, ನಮ್ಮ ನೆಲದ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಳ್ಳಲು ಉತ್ಸವಗಳು ಹೆಚ್ಚು ಸಹಕಾರಿಯಾಗಿವೆ. ವಿಜಯನಗರ ಸಾಮ್ರಾಜ್ಯದ ವೈಭವ ಹಾಗೂ ಅಂದಿನ ಮಾದರಿ ಆಡಳಿತ ವ್ಯವಸ್ಥೆಯನ್ನು ಸ್ಮರಿಸುವುದರ ಜತೆಗೆ ಮೌಲ್ವಿಕ ಜನಪರ ನೀತಿಯನ್ನು ಅಳವಡಿಸಿಕೊಳ್ಳುವ ಆಶಯ ಹೊತ್ತು ದಿ.ಎಂ.ಪಿ.ಪ್ರಕಾಶ್ ಅವರು ಹಂಪಿ ಉತ್ಸವ ಆಚರಣೆಯನ್ನು ಜಾರಿಗೆ ತಂದರು. ಆ ಸಂಪ್ರದಾಯ ನಿರಂತರವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದರು.

ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್ಪಿ ಹರಿಬಾಬು, ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್ ಇತರರಿದ್ದರು. ನಟ ಮಾಸ್ಟರ್ ಆನಂದ್ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ | Hampi Utsav 2023: ಜಾನಪದ ವಾಹಿನಿ ಮೆರವಣಿಗೆಯಲ್ಲಿ ಮೇಳೈಸಿತು ಕರ್ನಾಟಕದ ಸಾಂಸ್ಕೃತಿಕ, ಕಲಾ ವೈಭವ

Exit mobile version