ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವ ನಡೆಸಲು ಮೊದಲು ನಿಗದಿ ಮಾಡಿದ್ದ ದಿನದಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಆಗಿರುವುದರಿಂದ ಹಂಪಿ ಉತ್ಸವ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಸಂಕ್ರಾಂತಿಯ ಬಳಿಕವೇ ಹೊಸ ದಿನಾಂಕ ಫಿಕ್ಸ್ ಆಗುವ ನಿರೀಕ್ಷೆ ಇದೆ.
ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಹಂಪಿ ಉತ್ಸವವನ್ನು ಸರ್ಕಾರ, ಜಿಲ್ಲಾಡಳಿತ ನಡೆಸಿರಲಿಲ್ಲ. ಈ ಬಾರಿ ಎರಡು ದಿನಗಳ ಕಾಲ ಹಂಪಿ ಉತ್ಸವ ವನ್ನು ಅದ್ಧೂರಿಯಾಗಿ ನಡೆಸಬೇಕು ಅಂತ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕ ಆನಂದ್ ಸಿಂಗ್ ನಿರ್ಧರಿಸಿದ್ದರು. ಈ ಮೊದಲು 2023ರ ಜನವರಿ 6ರಂದು ಹಂಪಿ ಉತ್ಸವ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಆದರೆ, ಅದೇ ದಿನದಂದು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಹೀಗಾಗಿ ಈಗ ದಿನಾಂಕದಲ್ಲಿ ಬಲದಾವಣೆ ಮಾಡಲು ನಿರ್ಧರಿಸಲಾಗಿದ್ದು, ಜನವರಿ ಮಧ್ಯದಲ್ಲಿ ಹಂಪಿ ಉತ್ಸವ ನಡೆಸುವ ಸಾಧ್ಯತೆ ಇದೆ. ಇದರ ಅಂತಿಮ ದಿನಾಂಕ ಮೂರ್ನಾಲ್ಕು ದಿನಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಹಂಪಿ ಉತ್ಸವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ಅವರು ಪ್ರತಿ ವರ್ಷ ಹಂಪಿ ಉತ್ಸವ ಆಯೋಜಿಸುವ ಪ್ರದೇಶಗಳನ್ನು ಪರಿಶೀಲಿಸಿದರು. ಜಲಕ್ರೀಡಾ ಪ್ರದೇಶ, ಮುಖ್ಯ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಇತರ ಸ್ಥಳಗಳನ್ನು ಪರಿಶೀಲಿಸಲಾಯಿತು.
ಹಂಪಿ ಉತ್ಸವ ಸಂಭ್ರಮ
1980ರಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಮೊದಲ ಬಾರಿ ಆರಂಭಿಸಿದ ಈ ಹಂಪಿ ಉತ್ಸವ ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಅಂದಿನಿಂದ ಇಂದಿನವರೆಗೆ ಕೋವಿಡ್ ಸಂದರ್ಭವನ್ನು ಹೊರತುಪಡಿಸಿ ಅದ್ಧೂರಿ ಉತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡಿದ್ರಿಂದ ಹಂಪಿಯ ತುಂಗಭದ್ರಾ ನದಿಯ ದಡದಲ್ಲಿ ಸಾಂಕೇತಿಕವಾಗಿ ಉತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಎರಡು ದಿನಗಳ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಆಡಳಿತ, ಸಚಿವರು ಮತ್ತು ಶಾಸಕ ಆನಂದ್ ಸಿಂಗ್ ಉತ್ಸುಕರಾಗಿದ್ದಾರೆ. ಹಂಪಿ ಉತ್ಸವದ ಅಂತಿಮ ದಿನಾಂಕ ಡಿ.5ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ʻʻಹಂಪಿ ಉತ್ಸವ ನಡೆಸೋದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜೊತೆಗೆ ಚರ್ಚಿಸಿದ್ದೇವೆ. ಡಿಸೆಂಬರ್ 5 ರಂದು ನಡೆಯುವ ಸಭೆಯಲ್ಲಿ ಅಂತಿಮ ದಿನಾಂಕ ನಿಗದಿ ಮಾಡುತ್ತೇವೆ. ಸ್ಥಳೀಯವಾಗಿ ಹಂಪಿ ಉತ್ಸವವನ್ನು ಮೂರು ದಿನಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಸಚಿವರ ನೇತೃತ್ವದಲ್ಲಿ ಎಲ್ಲ ಪಾಲುದಾರರ ಸಭೆ ನಡೆಯಲಿದೆ. ಉತ್ಸವವನ್ನು ಅದ್ಧೂರಿಯಾಗಿ ನಡೆಸುವ ಉದ್ದೇಶ ನಮ್ಮದು. ಡಿಸೆಂಬರ್ ಮೂರನೇ ವಾರದಿಂದ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸುತ್ತೇವೆʼʼ ಎಂದು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದ್ದಾರೆ.
ಉತ್ಸವ ವೇಳೆ ಸಾಮಾನ್ಯ ಕಾರ್ಯಕ್ರಮಗಳಾದ ತುಂಗಾ ಆರತಿ, ಸಾಂಸ್ಕೃತಿಕ ಸಂಜೆ, ಹಂಪಿ ದರ್ಶನ ಬೈ ಸ್ಕೈ, ಹೆಲಿಕಾಪ್ಟರ್ ರೈಡ್, ಗ್ರಾಮೀಣ ಕ್ರೀಡೆಗಳ ಜೊತೆಗೆ ತುಂಗಭದ್ರಾ ನದಿಯಲ್ಲಿ ಜಲಕ್ರೀಡೆ ನಡೆಸಲು ಆಡಳಿತ ಮಂಡಳಿ ಮುಂದಾಗಿದೆ. ಹಿಂದೆ ನಡೆದ ಉತ್ಸವ ವೇಳೆ ಕಮಲಾಪುರ ಕೆರೆಯಲ್ಲಿ ಜಲಕ್ರೀಡೆಯೂ ನಡೆಯುತ್ತಿತ್ತು.