ಶಿವಮೊಗ್ಗ: ದೇಶಪ್ರೇಮ ಎನ್ನುವುದು ಎಲ್ಲವನ್ನೂ ಮೀರಿದ್ದು ಎನ್ನುವುದಕ್ಕೆ ಶಿವಮೊಗ್ಗದ ಆನಂದಪುರದಲ್ಲಿ ನಡೆದ ಎರಡು ವಿದ್ಯಮಾನಗಳು ಸಾಕ್ಷಿ.
ಆ ಮನೆಯಲ್ಲಿ ಅಪ್ಪ ತೀರಿಕೊಂಡು ಮೂರು ದಿನವಾಗಿತ್ತು. ಅಷ್ಟೆ. ಇಂಥ ಶೋಕದ ನಡುವೆಯೂ ಮನೆ ಮಗನಾದ ಸೈನಿಕ ದೇಶ ಪ್ರೇಮವನ್ನು ಮೆರೆದಿದ್ದಾರೆ. ಮನೆ ಮುಂದೆ ತ್ರಿವರ್ಣ ಧ್ವಜವನ್ನು ಕಟ್ಟಿ ಕಣ್ಣೀರಿನ ನಡುವೆಯೂ ಭಕ್ತಿಯಿಂದ ಸೆಲ್ಯೂಟ್ ಹೊಡೆದಿದ್ದಾರೆ. ಪಕ್ಕದಲ್ಲೇ ಇರುವ ಸಾಮಾಜಿಕ ಕಾರ್ಯಕರ್ತರೊಬ್ಬರ ತಾಯಿಯಂತೂ ಶನಿವಾರವೇ ಮೃತಪಟ್ಟಿದ್ದರು. ಆದರೂ ಅವರು ಅಮ್ಮನೂ ತಾಯಿ ಭಾರತಿಯೂ ಒಂದೇ ಎಂದು ಬಗೆದು ತಿರಂಗಾಕ್ಕೆ ನಮಿಸಿದ್ದಾರೆ.
ಘಟನೆ ೧: ಆನಂದಪುರ ನಿವಾಸಿಯಾಗಿರುವ ಸಂದೀಪ್ ಶೆಟ್ಟಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ನಾಗರಾಜ ಶೆಟ್ಟಿ ಮೂರು ದಿನ ಹಿಂದೆ ಅನಾರೋಗ್ಯದಿಂದ ಮರಣ ಹೊಂದಿದ್ದರು. ಸೇನೆಯಲ್ಲಿದ್ದ ಸಂದೀಪ್ ಅಪ್ಪನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗಾಗಿ ಬಂದಿದ್ದರು. ಶೋಕವಿದ್ದರೂ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ರಾಷ್ಟ್ರಪ್ರೇಮಕ್ಕೆ ಸಾಕ್ಷಿಯಾದರು.
ಘಟನೆ ೨: ಆನಂದಪುರದ ಅಶೋಕ ರಸ್ತೆಯ ನಿವಾಸಿ ಸಾಮಾಜಿಕ ಕಾರ್ಯಕರ್ತ ರಂಗನಾಥ್ ರವರ ತಾಯಿ ರಾಧಮ್ಮ ಶನಿವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತನ್ನ ತಾಯಿಯ ಶವ ಮನೆಯಲ್ಲಿದ್ದರೂ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರ ಪ್ರೇಮವನ್ನು ಮೆರೆತಿದ್ದಾರೆ .
ಇದನ್ನೂ ಓದಿ |Har Ghar tiranga Shimogga| ತಿರಂಗಾ ಮೆರವಣಿಗೆಯಲ್ಲಿ ಮನೆ ಮನೆಗೂ ತೆರಳಿ ಗಮನ ಸೆಳೆದ ದನದ ಕರು!