Site icon Vistara News

Vishwadarshana College: ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ, ಆರೋಗ್ಯ ಮಹತ್ವದ ಕ್ಷೇತ್ರಗಳು: ಹರಿಪ್ರಕಾಶ್ ಕೋಣೆಮನೆ

Hariprakash Konemane says Education, health are the most important areas that maintain the well-being of the society

ಕಾರವಾರ: ಶಿಕ್ಷಣ ಮತ್ತು ಮಾಧ್ಯಮ ಈ ಎರಡೂ ನಾನು ಅತ್ಯಂತ ಹೆಚ್ಚು ಪ್ರೀತಿಸುವ ಕ್ಷೇತ್ರಗಳಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆ (Vishwadarshana College) ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ನಾಡವರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್‌ನ 2022-23ನೇ ಸಾಲಿನ ನರ್ಸಿಂಗ್ ವಿದ್ಯಾರ್ಥಿಗಳ (24ನೇ ಬ್ಯಾಚ್‌) ದೀಪಧಾರಣ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ | ಮನಿ ಕಹಾನಿ ಅಂಕಣ: ನಮ್ಮ ಉದ್ಧಾರಕ್ಕೆ ನಾವೇ ಶಿಲ್ಪಿ

ಸಮಾಜದಲ್ಲಿ ಮಹತ್ವದ ಕ್ಷೇತ್ರಗಳೆಂದು ಗುರುತಿಸುವ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಮಹತ್ವದ್ದಾಗಿವೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದ ಇಲ್ಲಿಯವರೆಗೆ ಮಾಧ್ಯಮ ಕ್ಷೇತ್ರ ನಡೆದುಬಂದಿದೆ. ನಮ್ಮ ದೇಶ, ಸಮಾಜ, ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಯುವಲ್ಲಿ ಮಾಧ್ಯಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ನನಗೆ ಪ್ರಮುಖ ಪತ್ರಿಕೆಗಳಲ್ಲಿ ಸಂಪಾದಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರೂ ಜಿಲ್ಲೆಯೊಂದಿಗೆ ಬೆರೆಯುವ ಸಣ್ಣ ಅವಕಾಶ ಸಿಕ್ಕರೂ ತೊಡಗಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಜಿಲ್ಲೆಗೆ ಶೈಕ್ಷಣಿಕವಾಗಿ ಏನನ್ನಾದರೂ ಮಾಡಬೇಕು ಎನ್ನುವ ಯೋಚನೆ ಹಲವು ವರ್ಷಗಳಿಂದ ಇತ್ತು. ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಬೇಕು ಎನ್ನುವ ವಿಚಾರದಲ್ಲಿರುವಾಗಲೇ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಒದಗಿಬಂತು. ಜಿಲ್ಲೆ ಹೇಗಿರಬೇಕು ಎನ್ನುವ ಕನಸನ್ನು ಹೊಂದಿದ್ದಂತಹ ಕೆಲವೇ ಕೆಲವು ನಾಯಕರಲ್ಲಿ ವಿಶ್ವದರ್ಶನ ಸಂಸ್ಥಾಪಕರಾದ ದಿವಂಗತ ಉಮೇಶ ಭಟ್ ಅವರು ಒಬ್ಬರಾಗಿದ್ದರು. ಬಹಳ ಪರಿಶ್ರಮಪಟ್ಟು ಈ ಸಂಸ್ಥೆಯನ್ನು ಪ್ರಾರಂಭಿಸಿ ಒಂದು ಹಂತಕ್ಕೆ ತೆಗೆದುಕೊಂಡು ಬಂದಿದ್ದರು. ಅವರು ಅಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅದರ ಬಾಗಿಲುಗಳನ್ನು ತೆರೆಯುವ ಸುವರ್ಣಾವಕಾಶ ಒದಗಿ ಬಂದಿದ್ದು, ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.

ವಿಶ್ವದರ್ಶನ ಸಂಸ್ಥೆಗಾಗಿ ತಾಲೂಕಿನ ಹೊಸಗದ್ದೆಯಲ್ಲಿ ಉಮೇಶ ಭಟ್ ಅವರು ತೆಗೆದುಕೊಂಡಿದ್ದ ಜಾಗಕ್ಕೆ ಕಾನೂನಿನ ತೊಡಕುಗಳು ಎದುರಾಗಿದ್ದವು. ಇದೀಗ ಸರ್ಕಾರದ ಮಟ್ಟದಲ್ಲಿ ಎಲ್ಲ ಕಾನೂನಿನ ತೊಡಕುಗಳು ನಿವಾರಣೆಯಾಗಿ ಒಂದು ವರ್ಷದ ಹಿಂದೆ ಸಂಸ್ಥೆಗೆ ಜಾಗ ಮರಳಿ ಲಭಿಸಿದೆ. ಆ ಜಾಗದಲ್ಲಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ನಿರ್ಮಿಸುವ ಯೋಜನೆಗಳಿದ್ದು, ಮುಂದಿನ ದಿನಗಳಲ್ಲಿ ಅದನ್ನು ಬಿಎಸ್‌ಸಿ ನರ್ಸಿಂಗ್‌ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ನರ್ಸಿಂಗ್ ಕಾಲೇಜು, ಹಾಸ್ಟೆಲ್ ನಡೆಯುತ್ತಿದ್ದು, ಹಲವು ಗಣ್ಯರು ಸಹಕಾರ ನೀಡುತ್ತಿದ್ದಾರೆ ಎಂದರು.

ನರ್ಸಿಂಗ್ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ಕೊಡುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿಭಾನ್ವಿತ, ಸುಸಂಸ್ಕೃತ ವಿದ್ಯಾರ್ಥಿಗಳು ಇದ್ದಾರೆ. ಹಣ ಇಲ್ಲ ಎನ್ನುವ ಒಂದೇ ಕಾರಣಕ್ಕೆ ಉತ್ತಮ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎನ್ನುವ ಕಲ್ಪನೆ ನಮ್ಮದಾಗಿತ್ತು. ಜಿಲ್ಲೆಗೆ ಏನಾದರೂ ಕಿಂಚಿತ್ ಸೇವೆ ಸಲ್ಲಿಸಬೇಕು ಎಂದರೆ ಅದು ಶಿಕ್ಷಣದ ಮೂಲಕವೇ ಎನ್ನುವ ತೀರ್ಮಾನ ನಾವು ಮಾಡಿದ್ದೆವು. ವಿಶ್ವದರ್ಶನ ಸಂಸ್ಥೆ ಪ್ರಾರಂಭಿಸಿದ ಬಳಿಕ ನಮಗೆ ಅಭೂತಪೂರ್ವ ಯಶಸ್ಸು ಸಿಗುತ್ತಾ ಹೋಯಿತು. ಶಿಕ್ಷಣ ಸಂಸ್ಥೆ ಆರಂಭಿಸುವ ವ್ಯಕ್ತಿ ಶಾಶ್ವತವಲ್ಲ, ಸಂಸ್ಥೆ ಯಾವಾಗಲೂ ಶಾಶ್ವತವಾಗಿರಬೇಕು ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಚ್.ಎಸ್.ಶೆಟ್ಟಿ ಅವರು ಮಾತನಾಡಿ, ಗಡಿಯಲ್ಲಿ ಯೋಧ ಯಾವ ರೀತಿ ವೈರಿಗಳ ವಿರುದ್ಧ ಹೋರಾಡಿ ದೇಶವನ್ನು ಕಾಯುತ್ತಾನೋ, ಅದೇ ರೀತಿ ಕಣ್ಣಿಗೆ ಕಾಣದ ವೈರಿಗಳಾದ ಬೇರೆ ಬೇರೆ ರೀತಿಯ ರೋಗಾಣುಗಳ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ್ದೀರಿ. ಇದು ನಿಮ್ಮ ಕುಟುಂಬ, ಸ್ನೇಹಿತರು, ಸಂಬಂಧಿಕರನ್ನೂ ಮೀರಿ ವೃತ್ತಿಗೆ ಬದ್ಧವಾಗಿರುತ್ತೀರಿ ಎನ್ನುವ ಪ್ರತಿಜ್ಞೆ ಎಂದರು.

ವೈದ್ಯಕೀಯ ಸೇವೆ ಸಲ್ಲಿಸುವ ಈ ವೃತ್ತಿಯನ್ನು ಆಯ್ದುಕೊಳ್ಳುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ನೀವು ತೆಗೆದುಕೊಂಡಿರುವ ಸೇವೆ ಎಲ್ಲದಕ್ಕಿಂತ ಮಿಗಿಲಾದದ್ದು. ಕೊರೊನಾ ಸಂದರ್ಭದಲ್ಲಿ ನಾವೆಲ್ಲರೂ ಇದನ್ನು ನೋಡಿದ್ದೇವೆ. ಮುಂದುವರಿದ ರಾಷ್ಟ್ರಗಳಿಗಿಂತ ಉತ್ತಮವಾಗಿ ಕೊರೊನಾ ನಿರ್ವಹಣೆಯಲ್ಲಿ ಯಶಸ್ಸನ್ನು ಸಾಧಿಸಲು ನಿಮ್ಮಂತೆ ನರ್ಸಿಂಗ್ ವೃತ್ತಿ ಆಯ್ದುಕೊಂಡವರಿಂದಲೇ ಸಾಧ್ಯವಾಯಿತು ಎಂದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್‌ಫುಲ್‌ ಟಿಪ್ಸ್‌-ಭಾಗ 2

ಅಂಕೋಲಾ ತಾಲೂಕು ವೈದ್ಯಾಧಿಕಾರಿ ಡಾ. ನಿತಿನ್ ಹೊಸಮೇಲಕರ್ ಮಾತನಾಡಿ, ನರ್ಸಿಂಗ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಮುಂದಿನ ದಿನಗಳಲ್ಲಿ ನಿಮ್ಮ ವೃತ್ತಿಗೆ ಪೂರಕವಾಗಿರುವಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಶೈಕ್ಷಣಿಕ ಅರ್ಹತೆಯನ್ನ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ. ಹಣ ಅಥವಾ ವಸ್ತುಗಳಿಂದ ನಾವು ಬೇರೆಯವರಿಗೆ ಕ್ಷಣಿಕ ಸಹಾಯವನ್ನು ಮಾಡಬಹುದು. ಆದರೆ, ನಾವು ಕಲಿತ ವಿದ್ಯೆಯಿಂದ ಇಡೀ ಕುಟುಂಬವನ್ನೇ ಮುನ್ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆರ್ಥಿಕ ವ್ಯವಹಾರಗಳನ್ನು ನಿರ್ವಹಣೆ ಮಾಡುವ ಚಾರ್ಟೆಡ್ ಅಕೌಂಟೆಂಟ್ ವಿಘ್ನೇಶ್ವರ ಗಾಂವ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಅವರು ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು. ಬಳಿಕ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ರಾಜ್ಯದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಶ್ವದರ್ಶನ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ, ವಿಸ್ತಾರ ನ್ಯೂಸ್ ನಿರ್ದೇಶಕರಾದ ಶ್ರೀನಿವಾಸ್ ಹೆಬ್ಬಾರ್‌, ಮುಖ್ಯ ಅತಿಥಿಗಳಾದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ನಿರ್ದೇಶಕ ಎಚ್.ಎಸ್.ಶೆಟ್ಟಿ, ಅತಿಥಿಗಳಾದ ಅಂಕೋಲಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ್ ಮತ್ತಿತರರು ಇದ್ದರು.

Exit mobile version