ಶಿವಮೊಗ್ಗ: ಹಿಂದು ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಆರೋಪ ಹಾಗೂ ಎಲ್ಲರೂ ಒಂದೇ ಕಡೆ ಇದ್ದರೆ ಕಿರಿಕ್ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ಅವರನ್ನು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಮಹಮ್ಮದ್ ಖಾಸಿಪ್, ಸಯ್ಯದ್ ನದೀಮ್, ಸೈಯದ್ ಫಾರೂಕ್, ರಿಹಾನ್ ಷರೀಪ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಪಾನ್, ಮಹಮ್ಮದ್ ಇರ್ಫಾನ್, ಸಹೀದ್ ಉಲ್ಲಾ ಸಾರ್ಪಿ, ವಾಸಿಮ್ ಖಾನ್, ನಿಹಾರ್, ಮಗ್ದುಬ್ ಸೇರಿ ಒಟ್ಟು 10 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿತ್ತು. ಇವರಲ್ಲಿ ಪ್ರಮುಖ ಆರೋಪಿ ಕಾಸಿಫ್‌ನನ್ನು ಧಾರವಾಡ ಜೈಲಿಗೆ ವರ್ಗಾಯಿಸಿದ್ದು, ಉಳಿದ ಆರೋಪಿಗಳನ್ನು ಧಾರವಾಡ, ಬೆಳಗಾವಿ, ಬಿಜಾಪುರ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ.
ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ವಹಿಸಿದ್ದರಿಂದ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಗಳು ರಂಜಾನ್ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಸಂಪರ್ಕಿಸಿದ್ದರು. ಇದರಿಂದ ಆರೋಪಿಗಳಿಗೆ ಜೈಲಿನಲ್ಲಿ ಐಶಾರಾಮಿ ಸೌಲಭ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಮೇರೆಗೆ 15 ದಿನಗಳಿಂದ ಬೇರೆ ಬೇರೆ ಜೈಲುಗಳಿಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ | Kidnap | ಭಟ್ಕಳದಲ್ಲಿ ಬ್ರೆಡ್ ತರಲು ತೆರಳಿದ್ದ 8 ವರ್ಷದ ಬಾಲಕನ ಅಪಹರಣ