ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೀಡಿದ್ದ ಸನ್ಮಾನ ಸ್ವೀಕರಿಸದೇ ಅಪಮಾನ ಮಾಡಿದ್ದಾರೆ ಎಂಬ ವಿವಾದಕ್ಕೆ ಈಗ ಸ್ಪಷ್ಟತೆ ಸಿಕ್ಕಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್ ಅವರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲಿ ಅವರು ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಕ್ಷೇತ್ರಕ್ಕೆ ಯಾವುದೇ ಅವಮಾನ ಆಗಿಲ್ಲ. ಹಿತೈಷಿಗಳು ತಪ್ಪು ತಿಳಿದುಕೊಳ್ಳಬಾರದು ಎಂದು ಹೇಳಿದ್ದಾರೆ.
ಜೂನ್ 25ರಿಂದ 28ರವರೆಗೆ ರಾಜ್ಯ ಸರಕಾರದ ವತಿಯಿಂದ ನೂತನ ಶಾಸಕರಿಗೆ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಮಹದೇವಪುರದಲ್ಲಿರುವ ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಹಾಗೂ ಯೋಗ ಸೈನ್ಸಸ್ ಕೇಂದ್ರದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಎಸ್ಡಿಎಂ ಸಂಸ್ಥೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ನಿಗದಿಯಾಗಿತ್ತು. ಅಂತೆಯೇ ನಿರೂಪಕಿ ಸನ್ಮಾನದ ವಿವರ ಓದಿದಾಗ, ಸಿದ್ದರಾಮಯ್ಯ ಅವರು ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಸೂಚನೆ ಕೊಟ್ಟರು. ಆದಾಗ್ಯೂ ವೇದಿಕೆ ಮೇಲಿದ್ದವರು ಹಾಗೂ ಸುರೇಂದ್ರ ಕುಮಾರ್ ಫಲ, ಪುಷ್ಪಗಳನ್ನು ತಂದಿದ್ದರು. ಆದರೆ ಸಿದ್ದರಾಮಯ್ಯ ಅವರು ಅದನ್ನು ಸ್ವೀಕರಿಸದೇ ವಾಪಸ್ ಕಳುಹಿಸಿದ್ದರು.
ಇದನ್ನೂ ಓದಿ : Karnataka Budget 2023 : ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ; ಸಿಎಂ ಇದಕ್ಕೆ ಅಧ್ಯಕ್ಷರು!
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಸನ್ಮಾನ ಸ್ವೀಕರಿಸಲು ಒಪ್ಪಲಿಲ್ಲ ಎಂಬುದಾಗಿ ಸುದ್ದಿಯಾಯಿತು. ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರಲಿಲ್ಲ. ಇದೀಗ ಸುರೇಂದ್ರ ಕುಮಾರ್ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ.
ಏನಂದರು ಸುರೇಂದ್ರ ಕುಮಾರ್?
ಸುರೇಂದ್ರ ಕುಮಾರ್ ಅವರು ಈ ಕುರಿತು ವಿಡಿಯೊವೊಂದನ್ನು ಮಾಡಿ ವಿವರಣೆ ಕೊಟ್ಟಿದ್ದಾರೆ. ಅದರಲ್ಲಿ ಅವರು ಈ ರೀತಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬಂದಿದ್ದ ವೇಳೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಸಂಚರಿಸಿದ್ದರು. ನಮ್ಮಲ್ಲಿರುವ ವ್ಯವಸ್ಥೆಗಳನ್ನು ನೋಡಿ ಅಭಿಮಾನ ವ್ಯಕ್ತಪಡಿಸಿದ್ದರು. ಅತ್ಯಾಧುನಿಕ ವ್ಯವಸ್ಥೆಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದರು. ಅಂತೆಯೇ ಸಭಾ ಕಾರ್ಯಕ್ರಮದಲ್ಲಿ ಅವರಿಗೆ ಎಸ್ಡಿಎಂ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲು ತೀರ್ಮಾನಿಸಿದ್ದೆವು. ಈ ವೇಳೆ ಸಿದ್ದರಾಮಯ್ಯ ಅವರು ತಾವು ಕಾರ್ಯಕ್ರಮಗಳಲ್ಲಿ ಸನ್ಮಾನಗಳನ್ನು ಸ್ವೀಕರಿಸುವುದಿಲ್ಲ ಎಂದು ಹಿಂದೆಯೇ ಘೋಷಿಸಿರುವುದನ್ನು ಹೇಳಿದರು. ಆದಾಗ್ಯೂ ಸಂಸ್ಥೆಯ ಗೌರವಾರ್ಥ ಅದನ್ನು ಮುಟ್ಟುತ್ತೇನೆ ಎಂದಿದ್ದರು. ಅಂತೆಯೇ ಅವರು ಮುಟ್ಟಿ ನನ್ನ ಬೆನ್ನು ತಟ್ಟಿ ಕಳುಹಿಸಿದ್ದಾರೆ. ಸಿಎಂ ಅವರಿಗೆ ನಮ್ಮ ಕ್ಷೇತ್ರದ ಬಗ್ಗೆ, ಪೂಜ್ಯರಾದ ವೀರೇಂದ್ರ ಹೆಗ್ಗಡೆ ಅವರ ಮೇಲೆ ಅಪಾರ ಅಭಿಮಾನ ಹಾಗೂ ಭಕ್ತಿಯಿದೆ. ಆದರೂ ಈ ಸಂದರ್ಭವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ನನಗೆ ಅವಮಾನ ಮಾಡಲಾಗಿದೆ ಎಂದುಕೊಂಡಿದ್ದಾರೆ. ಆ ಬಗ್ಗೆ ವಿಡಿಯೊಗಳು ಕೂಡ ವೈರಲ್ ಆಗಿವೆ. ಅದು ಸತ್ಯಕ್ಕೆ ದೂರ, ಸಂಪೂರ್ಣ ಸುಳ್ಳು. ನನ್ನ ಅಭಿಮಾನಿಗಳು, ಕ್ಷೇತ್ರದ ಅಭಿಮಾನಿಗಳು ಅದನ್ನು ನಂಬಬಾರದು. ಜತೆಯಾಗಿ ಕೆಲಸ ಮಾಡಬೇಕು ಎಂಬುದೇ ನಮ್ಮ ಧ್ಯೇಯ. ಇಲ್ಲಿ ಯಾವುದೇ ತಪ್ಪು ನಡೆದಿಲ್ಲ. ಈ ವಿಚಾರವನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಎಂದು ಅವರು ಹೇಳಿದ್ದಾರೆ.