ಹಾಸನ: ತಾಲೂಕಿನ ದೊಡ್ಡಪುರ ಗ್ರಾಮದ ಶ್ರೀ ಉದ್ಭವ ರಾಮೇಶ್ವರ ನೂತನ ದೇವಾಲಯದ ಉದ್ಘಾಟನೆ, ಗೋಪುರ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ, ಗಿರಿಜಾ ಕಲ್ಯಾಣ ಮಹೋತ್ಸವವನ್ನು ಮಾರ್ಚ್ 13ರಿಂದ ಮಾರ್ಚ್ 17ರವರೆಗೆ ಆಯೋಜನೆ ಮಾಡಲಾಗಿದೆ.
ಅರಸೀಕೆರೆ ತಾಲೂಕು ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾರ್ಗದರ್ಶನ ಹಾಗೂ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ರಾಜಕೀಯ ನಾಯಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಾರ್ಚ್ 13ರಂದು ಬೆಳಗ್ಗೆ 4.30ಕ್ಕೆ ಅಗ್ರೋದಕದ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮಾರ್ಚ್ 14ರಂದು ಗಣಪತಿ ಪೂಜೆ, ದುರ್ಗಾಪೂಜೆ ಮುಂತಾದ ಪೂಜಾ ಕೈಂಕರ್ಯ ನಡೆಯಲಿದೆ. ಮಾರ್ಚ್ 15ರಂದು ಧ್ವಜದಂಡ ಪ್ರತಿಷ್ಠಾಪನೆ, ಧ್ವಜಾರೋಹಣ, ಗಣ ಹೋಮ, ಮೃತ್ಯುಂಜಯ ಪೂಜೆ, ನಡೆಯಲಿದ್ದು, ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಮಾರ್ಚ್ 16ರಂದು ಸಂಜೆ ಗಿರಿಜಾ ಕಲ್ಯಾಣ ನಡೆಯಲಿದೆ ಎಂದು ಅರ್ಚಕರಾದ ಸೋಮಶೇಖರಯ್ಯ ಶಾಸ್ತ್ರಿ ತಿಳಿಸಿದ್ದಾರೆ. ಮಾರ್ಚ್ 17ರ ಸಂಜೆ 5 ಗಂಟೆಗೆ ವಸಂತೋತ್ಸವ ಮಹಾಮಂಗಳಾರತಿ ನಡೆಯಲಿದೆ.
ಮಾರ್ಚ್ 13ರಿಂದ 17ರವರೆಗೆ ಪ್ರತಿದಿನ ಸಂಜೆ 7ಕ್ಕೆ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮವಿದೆ. ಪ್ರತಿದಿನ ಸಂಜೆ 7.30ಕ್ಕೆ ವೀರಗಾಸೆ ಹಾಗೂ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಮಾರ್ಚ್ 15ರಂದು ಸಂಜೆ 7.30ಕ್ಕೆ ಮಂಗಳೂರಿನ ಕಲಾತಂಡದಿಂದ ಚಂಡೆ ವಾದ್ಯ ಪ್ರದರ್ಶನ ನಡೆಯಲಿದೆ.