ಹಾಸನ: ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ (Drowned in water) ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ.
ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಗೊರೂರು ಅರಳಿಕಟ್ಟೆ ನಿವಾಸಿ ಗಿರೀಶ್ ಎಂಬುವವರ ಪುತ್ರಿ ನಿತ್ಯಾ, ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ತಮ್ಮ ಸಂಬಂಧಿಕರೊಂದಿಗೆ ಅರಳಿಕಟ್ಟೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು.
ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಹೇಮಾವತಿ ಹಿನ್ನೀರಿನಲ್ಲಿ ಆಟವಾಡುತ್ತಿದ್ದಾಗ ನಿತ್ಯಾ ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿದ್ದು,ನಿತ್ಯಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರು ನೀರುಪಾಲು
ಈಜಲು ತೆರಳಿದ್ದ ಬಾಲಕರಿಬ್ಬರು (Drowned in water) ನೀರುಪಾಲಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗರಾಜ (11), ಹೇಮಂತ (12) ನೀರಿನಲ್ಲಿ ಮುಳುಗಿ ಮೃತಪಟ್ಟವರು.
ನಿನ್ನೆ ಭಾನುವಾರ ಸಂಜೆ ಒಟ್ಟಿಗೆ ಇವರಿಬ್ಬರು ನೀರಿನ ಹೊಂಡಕ್ಕೆ ಈಜಲು ತೆರಳಿದ್ದರು. ಆದರೆ ನೀರಿನಿಂದ ಹೊರಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಬಾಲಕರಿಬ್ಬರು ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ನೀರಿನ ಹೊಂಡದ ಬಳಿ ಬಾಲಕರ ಚಪ್ಪಲಿ, ಬಟ್ಟೆಗಳೆಲ್ಲವೂ ಪತ್ತೆಯಾಗಿದೆ. ಹೀಗಾಗಿ ನೀರಿನ ಹೊಂಡದಲ್ಲಿ ಇಳಿದು ಹುಡಕಾಟ ನಡೆಸಿದಾಗ ಬಾಲಕರ ಮೃತದೇಹಗಳು ಪತ್ತೆಯಾಗಿದೆ. ಮೃತದೇಹಗಳನ್ನು ಗ್ರಾಮಸ್ಥರೇ ಹೊರ ತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗೀಸರ್ ಗ್ಯಾಸ್ ಸೋರಿಕೆ; ಪ್ರಜ್ಞೆ ತಪ್ಪಿ ಬಿದ್ದ ಯುವತಿ ಬಾತ್ರೂಮ್ನಲ್ಲೇ ಸಾವು
ಬೆಂಗಳೂರು: ಸ್ನಾನ ಮಾಡಲು ಬಾತ್ರೂಮ್ಗೆ (gas geyser leaks) ಹೋಗಿದ್ದ ಯುವತಿಯೊಬ್ಬಳು ಅಲ್ಲಿಯೇ ಮೃತಪಟ್ಟಿದ್ದಾಳೆ. ಬಾತ್ರೂಮ್ನಲ್ಲಿದ್ದ ಗೀಸರ್ನ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ರಾಜೇಶ್ವರಿ (23) ಮೃತ ದುರ್ದೈವಿ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ಈ ದುರ್ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ವರಿ, ಅಣ್ಣನ ಮದುವೆಗೆ ರಜೆ ಹಾಕಿದ್ದಳು. ಇಂದು ಬೆಳಗ್ಗೆ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಸರ್ನಿಂದ ಸೋರಿಕೆಯಾದ ವಿಷ ಅನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ತುಂಬ ಸಮಯ ಬಾತ್ ರೂಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಶ್ವರಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಬಾತ್ರೂಮ್ನಿಂದ ಹೊರಬಾರದ ಕಾರಣಕ್ಕೆ ಬಾಗಿಲು ಬಡಿದಿದ್ದಾರೆ. ಆಗಲೂ ತೆರೆಯದೇ ಇದ್ದಾಗ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ರಾಜೇಶ್ವರಿ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಆದಾಗಲೇ ರಾಜೇಶ್ವರಿ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.