ಹಾಸನ: ಪಶ್ಚಿಮ ಘಟ್ಟದ ಸಕಲೇಶಪುರ ತಾಲೂಕಿನ ಕಾಡಿನಲ್ಲಿ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಒಬ್ಬರು ಸಾವಿಗೀಡಾಗಿದ್ದಾರೆ.
ಫೆಬ್ರವರಿ 16ರ ಗುರುವಾರ ಮಧ್ಯಾಹ್ನ ಕಾಡುಮನೆ ಎಸ್ಟೇಟ್ ಸಮೀಪದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ನಂದಿಸಲು ಹೋಗಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಅವರು ಗಾಯಗೊಂಡು, ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾಳ್ಗಿಚ್ಚು ಆರಿಸಲು ಡಿಆರ್‌ಎಫ್‌ಓ ಮಂಜುನಾಥ್ ನೇತೃತ್ವದಲ್ಲಿ ತೆರಳಿದ್ದ ಆರು ಜನ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದರು. ವೇಗವಾಗಿ ವ್ಯಾಪಿಸಿದ್ದ ಬೆಂಕಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಸುತ್ತುವರೆದಿತ್ತು. ಡಿಆರ್‌ಎಫ್‌ಓ ಮಂಜುನಾಥ, ಫಾರೆಸ್ಟ್ ಗಾರ್ಡ್ ಸುಂದರೇಶ್, ವಾಚರ್‌ಗಳಾದ ತುಂಗೇಶ್ ಮತ್ತು ಮಹೇಶ್‌ಗೆ ಗಾಯಗಳಾಗಿತ್ತು. ಸುಂದರೇಶ್ ಹಾಗು ಮಂಜುನಾಥ ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿದ್ದರು.
ರಸ್ತೆ ಸಂಪರ್ಕ ಇಲ್ಲದ ಸ್ಥಳದಿಂದ ಇವರನ್ನು ಅಡ್ಡೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಝೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು. ಶೇಕಡಾ 80ರಷ್ಟು ಸುಟ್ಟಗಾಯಗಳಾಗಿದ್ದ ಇಬ್ಬರಲ್ಲಿ ಸುಂದರೇಶ್ ನಿನ್ನೆ ರಾತ್ರಿ ಮೃತಪಟ್ಟರು. ಇನ್ನೊಬ್ಬ ಗಾಯಾಳು ಮಂಜುನಾಥ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸುಂದರೇಶ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು. ಕಾಡು ರಕ್ಷಣೆಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ್ದ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಮಾಡಿದ ಸಾವಿರಾರು ಜನರ ಪ್ರಾರ್ಥನೆ ಫಲಿಸಿಲ್ಲ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಸುಂದರೇಶ್ ಅಂತ್ಯಕ್ರಿಯೆ ನೆರವೇರಲಿದೆ. ಹಾಸನದಲ್ಲಿ ಅರಣ್ಯ ಇಲಾಖೆ ವತಿಯಿಂದ ಗೌರವಾರ್ಪಣೆ ಬಳಿಕ ಹುಟ್ಟೂರಿಗೆ ಮೃತದೇಹ ಸ್ಥಳಾಂತರದ ಸಾಧ್ಯತೆಯಿದೆ.
ಇದನ್ನೂ ಓದಿ: Fire Accident: ಕಾಡ್ಗಿಚ್ಚು ನಂದಿಸಲು ಹೋದ ನಾಲ್ವರು ಸಿಬ್ಬಂದಿಗೆ ತಗುಲಿದ ಬೆಂಕಿ; ಗಾಯಾಳುಗಳು ಆಸ್ಪತ್ರೆಗೆ ದಾಖಲು