Site icon Vistara News

Hassan News: ಮರ ಆಧಾರಿತ ಕೃಷಿ ಮಾದರಿ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ

ಹಾಸನ: ಈಶ ಸಂಸ್ಥೆಯ “ಕಾವೇರಿ ಕೂಗು” ಅಭಿಯಾನದಿಂದ “ಸಮೃದ್ಧ ಭವಿಷ್ಯಕ್ಕಾಗಿ ಮರ ಆಧಾರಿತ ಕೃಷಿ” ಎಂಬ ತರಬೇತಿ ಕಾರ್ಯಕ್ರಮವನ್ನು (Hassan News) ಹಾಸನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾವೇರಿ ಕೂಗು ಅಭಿಯಾನದ ಕ್ಷೇತ್ರ ಸಂಯೋಜಕ ತಮಿಳ್ ಮಾರನ್ ಮಾತನಾಡಿ, ರೈತರಿಗೆ ಮರ ಮತ್ತು ಮಣ್ಣಿನ ಸೂಕ್ತತೆ ಮತ್ತು ತೋಟದ ವಿನ್ಯಾಸದ ವಿವರಗಳ ಮೂಲ ಪರಿಕಲ್ಪನೆಗಳನ್ನು ಪರಿಚಯಿಸಿದರು. ಬಳಿಕ ಮಾತನಾಡಿದ ಅವರು, “ಕಾವೇರಿ ಕೂಗು” ಅಭಿಯಾನವು ಕೃಷಿ ಭೂಮಿಯಲ್ಲಿ ಸ್ಥಳೀಯ ಮತ್ತು ನಿಧಾನವಾಗಿ ಬೆಳೆಯುವ ಟಿಂಬರ್ ಮರಗಳನ್ನು ನೆಡಲು ರೈತರನ್ನು ಉತ್ತೇಜಿಸುತ್ತದೆ, ಆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಮತ್ತು ಮಣ್ಣಿನ ಜೈವಿಕ ಅಂಶವನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

ರೈತರು ಮರ ಆಧಾರಿತ ಕೃಷಿ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಅವನತಿ ಮತ್ತು ಹವಾಮಾನ ಬದಲಾವಣೆಯಂತಹ ಪ್ರಸ್ತುತ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುವ ದೇವರ ಹಾಗೆ ಎಂದು ಅಭಿಪ್ರಾಯಪಟ್ಟರು.

ತುಮಕೂರಿನ ಯಶಸ್ವಿ ರೈತ ಶಿವನಂಜಯ್ಯ ಬಾಳೇಕಾಯಿ ಮಾತನಾಡಿ, ಉತ್ತಮ ಆದಾಯ ಗಳಿಸಲು ಮರ ಆಧಾರಿತ ಕೃಷಿಯೇ ಉತ್ತಮ. ಒಂದು ವರ್ಷದಲ್ಲಿ ನಾನು ಕೇವಲ 60 ರಿಂದ 70 ಸಾವಿರ ಖರ್ಚು ಮಾಡುತ್ತೇನೆ ಮತ್ತು ಮರ ಆಧಾರಿತ ಕೃಷಿಯಿಂದ 15 ಲಕ್ಷ ಗಳಿಸುತ್ತೇನೆ ಎಂದು ಹೇಳಿದ ಅವರು, ಇದೇ ವೇಳೆ ತೋಟದ ಗಡಿಯಲ್ಲಿರುವ ಟಿಂಬರ್ ಮರಗಳೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಸೂರ್ಯನ ಬೆಳಕನ್ನು ಬಳಸುವ ಬಗ್ಗೆಯೂ ವಿವರವಾಗಿ ಮಾತನಾಡಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಿಲ್ವಿಕಲ್ಚರ್ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ ತಾಂತ್ರಿಕ ತರಬೇತಿಯ ನೇತೃತ್ವ ವಹಿಸಿ ಮಾತನಾಡಿ, ಮರದ ಸಸಿಗಳನ್ನು ನೆಡುವ ಪೂರ್ವ ಮತ್ತು ನಂತರದ ವೈಜ್ಞಾನಿಕ ವಿಧಾನಗಳ ಕುರಿತು ಚರ್ಚಿಸಿದರು.

ಇದನ್ನೂ ಓದಿ: Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

ಈ ವೇಳೆ ಮಾತನಾಡಿದ ಡಾ. ರಾಮಕೃಷ್ಣ ಹೆಗಡೆ, ಭಾರತೀಯ ಮಾರುಕಟ್ಟೆಯಲ್ಲಿ ಟಿಂಬರ್ ಮರಗಳ ಬೇಡಿಕೆ ತುಂಬಾ ಹೆಚ್ಚಾಗಿದೆ; ಈ ಬೇಡಿಕೆಯನ್ನು ಪೂರೈಸುವಲ್ಲಿ ನಾವು ಕೊರತೆಯನ್ನು ಎದುರಿಸುತ್ತಿದ್ದೇವೆ. ರೈತರು ಮಾತ್ರ ಈ ಬೇಡಿಕೆಯನ್ನು ಪೂರೈಸಬಹುದು ಎಂದು ತಿಳಿಸಿದ ಅವರು, ಮರ ಆಧಾರಿತ ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಲಾಭದಾಯಕ ಆದಾಯವನ್ನು ಗಳಿಸಬಹುದು ಎಂದು ಹೇಳಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆಂಚ ರೆಡ್ಡಿ ಅವರು ಕಾಡು ಮರಗಳು ಮತ್ತು ಇತರ ಬೆಳೆಗಳ ಜತೆಗೆ ಜೇನು ಕೃಷಿಯನ್ನು ಮಾಡುವ ಕುರಿತು ವಿವರಿಸಿದರು.

ಮರ ಆಧಾರಿತ ಕೃಷಿಯ ಕುರಿತು ಮಾತನಾಡಿದ ದಯಾನಂದ, ನಾನು 40 ವರ್ಷಗಳ ಹಿಂದೆ 100 ತೇಗದ ಮರಗಳನ್ನು ನೆಟ್ಟಿದ್ದೆ, ಕೆಲವು ತಿಂಗಳ ಹಿಂದೆ 10 ಲಕ್ಷ ಮೌಲ್ಯದ 6-8 ಮರಗಳನ್ನು ಕಟಾವು ಮಾಡಿದ್ದೇನೆ. ನಾನು ಈ ಮರಗಳನ್ನು ನನ್ನ ಮಗಳಿಗೆ ಅವಳ ಹೊಸ ಮನೆಯನ್ನು ನಿರ್ಮಿಸಲು ಉಡುಗೊರೆಯಾಗಿ ನೀಡಿದೆ. ಉಳಿದ ಮರಗಳಿಂದ ನಾನು ಇನ್ನೂ 1 ಕೋಟಿ ರೂ. ಗಳಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ತರಬೇತಿಯಲ್ಲಿ ಕೃಷಿ-ಅರಣ್ಯ ಮಾದರಿಯ ಯಶಸ್ಸಿನ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಯಿತು.

Exit mobile version