Site icon Vistara News

Maths problem! | ಗಣಿತ ಲೆಕ್ಕ ಬಿಡಿಸುವ ಗಲಾಟೆ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಡಿದಾಡಿಕೊಂಡ ಅಧಿಕಾರಿಗಳು

Hassan News

ಹಾಸನ: ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ (Hassan News) ಶನಿವಾರ ಸಂಜೆ (ಸೆ.17) ಅಕ್ಷರ ದಾಸೋಹ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ಹಾಗೂ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಬಡಿದಾಡಿಕೊಂಡ ಅಧಿಕಾರಿಗಳಾಗಿದ್ದಾರೆ.

ಇಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಾಗಾರವೊಂದು ಆಯೋಜನೆಯಾಗಿತ್ತು. ಈ ವೇಳೆ, ಗಿರಿಜಾನಂದ ಮುಂಬಳೆ ಅವರು ಒಂದು ಲೆಕ್ಕವನ್ನು ಬಿಡಿಸುವುದನ್ನು ಶಿಕ್ಷಕರಿಗೆ ತಿಳಿಸಿಕೊಟ್ಟರು. ಆದರೆ, ಈ ರೀತಿ ಲೆಕ್‌ ಬಿಡಿಸುವುದು ತಪ್ಪು ವಿಧಾನ ಎಂದು ಶಿಕುಮಾರ್‌ ಅವರಿಗೆ ಅನಿಸಿದೆ. ಅವರು ಅದನ್ನು ಅಲ್ಲೇ ಹೇಳಿದರು. ಆ ವಿಚಾರ ಅಲ್ಲಿಗೆ ಮುಕ್ತಾಯಗೊಂಡಿದೆ.

ನಂತರ ಅವರಿಬ್ಬರೂ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದಾರೆ. ಶಿಕ್ಷಣಾಧಿಕಾರಿ ಕೊಠಡಿಯಲ್ಲಿದ್ದ ಶಿವಕುಮಾರ್‌ ಅವರನ್ನು ಸ್ವಲ್ಪ ಮಾತನಾಡಲಿಕ್ಕಿದೆ ಹೊರಗೆ ಬನ್ನಿ ಎಂದು ಮುಂಬಳೆ ಕರೆದಿದ್ದಾರೆ. ಆದರೆ, ಶಿವಕುಮಾರ್‌ ತೆರಳುವುದಿಲ್ಲ. ಇದರಿಂದ ಕೋಪಿತರಾದ ಗಿರಿಜಾನಂದ ಮುಂಬಳೆ ಮತ್ತೆ ಬಂದು ಕರೆದಿದ್ದಾರೆ. ಹಾಗೆ ಮೇಲೆ ಹೋದಾಗ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮುಂಬಳೆ ಅವರು ಶಿವಕುಮಾರ್‌ ಅವರಲ್ಲಿ ʻʻಎಲ್ಲರ ಎದುರು ಈ ರೀತಿ ಅಪಮಾನ ಮಾಡುವುದು ಸರಿಯೇʼ ಎಂದು ಕೇಳಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ಅಂದರೆ ಕೇವಲ ಗುದ್ದಾಡಿಕೊಂಡಿದ್ದಲ್ಲ. ಮೇಜು ಕುರ್ಚಿಗಳ ಮೇಲೆಲ್ಲ ಬೀಳಿಸಿ ಹೊಡೆದುಕೊಂಡಿದ್ದಾರೆ. ಈ ಹಂತದಲ್ಲಿ ಶಿವಕುಮಾರ್‌ ಅವರ ಕೈಯ ಮೂಳೆಯೂ ಮುರಿದಿದೆ.

ಇದನ್ನೂ ಓದಿ | ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ, ತಾಯಿ-ಮಗಳ ಆತ್ಮಹತ್ಯೆ

ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು ಅರಕಲಗೂಡು ಪಟ್ಟಣದ ಸರ್ಕಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಇಬ್ಬರೂ ಪೊಲೀಸ್ ಠಾಣೆಗೆ ಯಾವುದೇ ದೂರು ದಾಖಲು ಮಾಡಿಲ್ಲ. ಒಂದು ಹಂತದಲ್ಲಿ ಇಬ್ಬರಿಗೂ ತಾವು ಈ ರೀತಿ ಹೊಡೆದಾಡಿಕೊಂಡಿದ್ದು ತಪ್ಪು ಎಂದು ಅವರಿಗೆ ಅನಿಸಿದೆ. ಈ ತಿಳುವಳಿಕೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಅನಗತ್ಯವಾಗಿ, ತನ್ನದಲ್ಲದ ತಪ್ಪಿಗೆ ಹೊಡೆತ ತಿಂದ ಶಿವಕುಮಾರ್‌ ಅವರೇ ʻಇರ್ಲಿ ಬಿಡು.. ಮರೆತು ಬಿಡೋಣʼ ಎನ್ನುತ್ತಾರೆ. ಮುಂಬಳೆ ಅವರು ಕೂಡಾ ಕಣ್ಣೀರು ಸುರಿಸುತ್ತಾರೆ.

ಹಾಗಿದ್ದರೆ ಲೆಕ್ಕ ತಪ್ಪಾಗಿತ್ತಾ?
ಲೆಕ್ಕ ಬಿಡಿಸುವ ವಿಚಾರದಲ್ಲಿ ಆರಂಭವಾದ ಈ ತಗಾದೆಯಲ್ಲಿ ನಿಜಕ್ಕೂ ಏನಾಗಿದೆ ಎನ್ನುವುದನ್ನು ಶಿಕ್ಷಣಾಧಿಕಾರಿಗಳು ವಿವರಿಸಿದ್ದಾರೆ. ʻʻಇಬ್ಬರೂ ಒಳ್ಳೆಯ ಶಿಕ್ಷಕರು. ಇಬ್ಬರೂ ಪಿಸಿಎಂ ಮಾಡಿದವರೇ. ಒಬ್ಬರಿಗೆ ಇನ್ನೊಬ್ಬರು ಮಾಡಿದ ರೀತಿ ಸರಿ ಇಲ್ಲ ಅನಿಸಿದೆ. ಅದನ್ನು ಹೇಳಿದ್ದಾರೆ. ಕೊನೆಗೆ ಹೊರಗಡೆ ಬಂದು ಜಗಳ ಮಾಡಿಕೊಂಡಿದ್ದಾರೆ. ಲೆಕ್ಕ ಬಿಡಿಸಲು ಬೇರೆ ಬೇರೆ ವಿಧಾನಗಳು ಇರುತ್ತವೆ. ಅವರು ಬಿಡಿಸಿದ ರೀತಿ ತಪ್ಪು ಎಂದು ಹೇಳಲಾಗುವುದಿಲ್ಲ. ಬೇರೆ ವಿಧಾನದಲ್ಲಿ ಮಾಡಬಹುದು ಎಂದು ಹೇಳಿದ್ದೂ ತಪ್ಪಲ್ಲʼʼ ಎಂದಿದ್ದಾರೆ.

Exit mobile version