ಹಾಸನ: ಆಹಾರವನ್ನು ಹುಡುಕಿ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು, ಸಕಲೇಶಪುರ ತಾಲೂಕು ಸುಂಡೆಕೆರೆ ಬಳಿಯ ಕೆಳಗಳಲೆಯಲ್ಲಿ ಶನಿವಾರ ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿರುವಾಗ ಕಾಡಾನೆಯೊಂದು ತುಳಿದು ರೈತರೊಬ್ಬರು ಮೃತಪಟ್ಟಿದ್ದಾರೆ.
ಕೃಷ್ಣೇಗೌಡ (57) ಮೃತ ವ್ಯಕ್ತಿ. ಮುಂಜಾನೆ ತಂದೆ, ಮಗ, ಮೊಮ್ಮಗ ಕೆಲಸಕ್ಕೆ ಹೋಗುತ್ತಿರುವ ವೇಳೆ ಮೂರು ಕಾಡಾನೆ ದಿಢೀರ್ ದಾಳಿ ಮಾಡಿದ್ದು, ಕೃಷ್ಣೇಗೌಡ ಓಡಲಾಗದೆ ಆನೆದಾಳಿಗೆ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೃಷ್ಣೇಗೌಡರ ಮಗ, ಮೊಮ್ಮಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೃಷ್ಣೇಗೌಡ ಅವರ ಮೃತದೇಹ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೊಂದೆಡೆ ಪುಂಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಇದನ್ನು ಅರಣ್ಯ ಇಲಾಖೆ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಪುಂಡಾನೆಗಳು ಸಿಕ್ಕ ಸಿಕ್ಕಲ್ಲಿ ದಾಳಿ ಮಾಡುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| Viral Video| ಮರಿ ಆನೆಗೆ Z Plus Security ನೀಡಿದ ಪೋಷಕ ಆನೆಗಳು!