Site icon Vistara News

Train services: ಎಡಕುಮೇರಿಯಲ್ಲಿ ದುರಸ್ತಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

train service

ಹಾಸನ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದ ಕಾರಣಕ್ಕೆ ಆ.4ರವರೆಗೆ 14 ರೈಲುಗಳ ಓಡಾಟ (trains are Cancelled) ರದ್ದುಪಡಿಸಲಾಗಿತ್ತು. ಇದೀಗ ಅಸ್ತವ್ಯಸ್ತಗೊಂಡಿದ್ದ ರೈಲ್ವೆ ಹಳಿ ಸರಿಪಡಿಸಿ ರಿಸ್ಟೋರೇಷನ್ ಕಾರ್ಯ (Train services) ಪೂರ್ಣಗೊಂಡಿದೆ. ನಿನ್ನೆ ಗುರುವಾರದಿಂದಲೇ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ.

ಕಳೆದ ಜು.27ರಂದು ಹಾಸನ ಜಿಲ್ಲೆಯ (Hassan news) ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟಕ್ಕೆ (Karnataka Rain News) ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು (landslide) ಕುಸಿದಿತ್ತು. ಸಕಲೇಶಪುರ (Sakaleshpur) ತಾಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದ ಪರಿಣಾಮ ರೈಲುಗಳ ಓಡಾಟ ಬಂದ್‌ (Train services) ಆಗಿತ್ತು.

train service

ಕಳೆದ 20 ದಿನಗಳಿಂದ ಬಂದ್ ಆಗಿದ್ದ ಪ್ಯಾಸೆಂಜರ್ ರೈಲು ಸಂಚಾರ ಶುರುವಾಗಿದೆ. ಮೊದಲು ಯಶವಂತಪುರ- ಮಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸಂಚಾರಿಸಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಎರಡು ದಿನಗಳ ಹಿಂದೆ ಗೂಡ್ಸ್ ರೈಲು ಓಡಿಸಿ ಟ್ರ್ಯಾಕ್ ಚೆಕ್ ಮಾಡಿದ್ದರು. ಎಡೆಕುಮರಿ ಬಳಿ 420 ಸಿಬ್ಬಂದಿ ಒಟ್ಟುಗೂಡಿ ರೈಲ್ವೆ ಹಳಿ , ಭೂಕುಸಿತದ ಸ್ಥಳ ಸರಿಪಡಿಸಿದ್ದರು.

ನಿರಂತರ ಮತ್ತು ಭಾರಿ ಮಳೆಯ ಹೊರತಾಗಿಯೂ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದ ಕಡಗರವಳ್ಳಿ ಮತ್ತು ಯಡಕುಮರಿ ನಿಲ್ದಾಣಗಳ ನಡುವಿನ ಹಳಿಯ ಪುನಃಸ್ಥಾಪನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಾರ್ಯಾಚರಣೆಗೆ ಮಳೆ ಆಗಾಗ್ಗೆ ಅಡ್ಡಿಪಡಿಸಿತ್ತು. ಆ.4 ರಂದು ಬೆಳಗ್ಗೆ 08:58 ಗಂಟೆಗೆ ಸರಕು ರೈಲಿಗೆ ಮಾತ್ರ ‘ಸೂಕ್ತ’ ಎಂದು ಪ್ರಮಾಣೀಕರಿಸಲಾಯಿತು. ಇದರೊಟ್ಟಿಗೆ ಟ್ರ್ಯಾಕ್‌ನ ಸುರಕ್ಷತೆಯನ್ನು ನಿರ್ಣಯಿಸಲು ಮತ್ತು ದೃಢೀಕರಿಸಲು ಎಂಜಿನ್ ರೋಲಿಂಗ್ ಪರೀಕ್ಷೆಯನ್ನು ನಡೆಸಲಾಯಿತು.

ಆನಂತರ ಆ.6ರಂದು, ಸಂಪೂರ್ಣವಾಗಿ ಲೋಡ್ ಮಾಡಿದ ಸರಕು ರೇಕ್ ಪುನಃಸ್ಥಾಪಿಸಲಾದ ಟ್ರ್ಯಾಕ್ ಅನ್ನು ಯಶಸ್ವಿಯಾಗಿ ದಾಟಿತ್ತು. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 15 ಕಿ.ಮೀ ವೇಗದ ನಿರ್ಬಂಧವನ್ನು ವಿಧಿಸಲಾಗಿದೆ. ನಿನ್ನೆ ಗುರುವಾರ ಮೊದಲ ಪ್ಯಾಸೆಂಜರ್ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್‌ 12:37 ಗಂಟೆಗೆ ಯಶಸ್ವಿಯಾಗಿ ಹಾದುಹೋಗಿದೆ. ಆ ಮಾರ್ಗದಲ್ಲಿನ ಎಲ್ಲಾ ರೈಲುಗಳು ಅವುಗಳ ನಿಗದಿತ ದಿನಾಂಕ ಮತ್ತು ಸಮಯದ ಪ್ರಕಾರ ಚಲಿಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: UGCET 2024: ಯುಜಿಸಿಇಟಿ ಮೊದಲ ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಸಂಜೆ 6 ಗಂಟೆಗೆ ಪ್ರಕಟ

ವಾಸ್ಕೋ-ವೆಲಂಕಣಿ ನಡುವೆ ವಿಶೇಷ ರೈಲು

ಪ್ರಯಾಣಿಕರ ಅನುಕೂಲಕ್ಕಾಗಿ ತಮಿಳುನಾಡಿನ ವೆಲಂಕಣಿಯಲ್ಲಿ ನಡೆಯಲಿರುವ ಹಬ್ಬದ ಪ್ರಯುಕ್ತ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

1) ರೈಲು ಸಂಖ್ಯೆ 07361/07362 ವಾಸ್ಕೋ-ಡ-ಗಾಮಾ ಮತ್ತು ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಎರಡು ದಿಕ್ಕಿನಲ್ಲಿ ಒಟ್ಟು 3 ಟ್ರಿಪ್‌ ಓಡಿಸಲಾಗುತ್ತಿದೆ.

2) ರೈಲು ಸಂಖ್ಯೆ 07361 ಆಗಸ್ಟ್ 27 ಮತ್ತು ಸೆಪ್ಟೆಂಬರ್ 2 & 6 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರಾತ್ರಿ 09:55 ಗಂಟೆಗೆ ಹೊರಟು, ಮೂರನೇ ದಿನ ಮಧ್ಯರಾತ್ರಿ 01:30 ಗಂಟೆಗೆ ವೆಲಂಕಣಿ ನಿಲ್ದಾಣವನ್ನು ತಲುಪಲಿದೆ.

3) ಅದೇ ರೀತಿ ರೈಲು ಸಂಖ್ಯೆ 07362 ಆಗಸ್ಟ್ 29, ಸೆಪ್ಟೆಂಬರ್‌ 4 ಮತ್ತು 8 ರಂದು ರಾತ್ರಿ 11:55 ಗಂಟೆಗೆ ವೆಲಂಕಣಿ ನಿಲ್ದಾಣದಿಂದ ಹೊರಟು, ಮೂರನೇ ದಿನ ಮಧ್ಯರಾತ್ರಿ 12:15 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡು ಮಾರ್ಗದಲ್ಲಿ ಮಡಗಾಂವ್, ಸ್ಯಾನ್ವೋರ್ಡಮ್‌, ಕುಲೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು, ಕೃಷ್ಣರಾಜಪುರಂ, ವೈಟ್ಫೀಲ್ಡ್, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂರ್ ಮತ್ತು ನಾಗಪಟ್ಟಣಂ ಈ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲುಗಳು ಎರಡು ಎಸಿ ಟು ಟೈಯರ್, ನಾಲ್ಕು ಎಸಿ ತ್ರಿ ಟೈಯರ್, ಹತ್ತು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ಎಸ್ಎಲ್ಆರ್/ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಮುಂಗಡ ಬುಕಿಂಗ್ ಮತ್ತು ಇತರ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version