Site icon Vistara News

Wheeling Menace: ಪುಂಡರ ವ್ಹೀಲಿಂಗ್‌ ಹುಚ್ಚಾಟದಿಂದ ಭೀಕರ ಅಪಘಾತ, ಸಾವು ಬದುಕಿನ ನಡುವೆ ಯುವತಿಯರು

wheeling accident hassan

ಹಾಸನ: ಹಾಸನದಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಹುಚ್ಚಾಟದಿಂದ (wheeling menace) ಭೀಕರ ಅಪಘಾತ ಸಂಭವಿಸಿದ್ದು, ಅಮಾಯಕ ಯುವತಿಯರಿಬ್ಬರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದಾರೆ.

ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ಘಟನೆ ನಡೆದಿದೆ. ರಾತ್ರಿ ಸಾಲಗಾಮೆ ರಸ್ತೆಯ ಫುಡ್ ಕೋರ್ಟ್‌ನಲ್ಲಿ ಊಟ ಮುಗಿಸಿಕೊಂಡು ಬೈಕ್‌ ಏರಿದ್ದ ಭೂಮಿಕಾ, ಸಿಂಚನ ಎಂಬ ಯುವತಿಯರು ಮನೆಗೆ ಮರಳುತ್ತಿದ್ದರು. ಈ ಸಂದರ್ಭ ನಿರ್ಲಕ್ಷ್ಯ ಹಾಗೂ ಅತಿವೇಗವಾಗಿ ವ್ಹೀಲಿಂಗ್‌ ಮಾಡಿಕೊಂಡು ಬಂದ ಯುವಕರ ಬೈಕ್‌ ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಯುವತಿಯರ ಬೈಕ್‌ ನೆಲಕ್ಕೆ ಅಪ್ಪಳಿಸಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಹೀಲಿಂಗ್‌ ಮಾಡುತ್ತಿದ್ದ ಪುಂಡನನ್ನು ಶಾಕೀರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ.

ಜನನಿಬಿಡ ಪ್ರದೇಶದಲ್ಲಿ ವ್ಹೀಲಿಂಗ್ ಮಾಡಿ ಯುವತಿಯರಿಗೆ ಜೀವಕ್ಕೆ ಮಾರಕರಾದ ಇಬ್ಬರನ್ನೂ ಸಾರ್ವಜನಿಕರು ಸ್ಥಳದಲ್ಲೇ ಹಿಡಿದು ಬಟ್ಟೆ ಕಳಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಾಕೀರ್ ಹಾಗೂ ಅಪ್ರಾಪ್ತ ವಯಸ್ಕನನ್ನು ಹಾಸನ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಾಸನ ನಗರದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿಮೀರಿದೆ. ಮದ್ಯಪಾನ ಮಾಡಿ ನಿರ್ಲಕ್ಷ್ಯದಿಂದ ಚಲಾಯಿಸುವುದಲ್ಲದೆ, ಜನನಿಬಿಡ ಪ್ರದೇಶಗಳಲ್ಲಿಯೂ ವ್ಹೀಲಿಂಗ್‌ ಮಾಡಿ ಸಾರ್ವಜನಿಕರಿಗೆ ಆತಂಕ ಸೃಷ್ಟಿಸುತ್ತಿದ್ದಾರೆ. ಹೆಲ್ಮೆಟ್‌ ಕೂಡ ಹಾಕದೆ ಚಲಾಯಿಸುವುದು, ಅದನ್ನು ರೀಲ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕುವ ಹುಚ್ಚಾಟ ಕೂಡ ನಡೆದಿದೆ. ಇದಕ್ಕೆ ಶೀಘ್ರವಾಗಿ ಕಡಿವಾಣ ಹಾಕುವಂತೆ ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bike Wheeling: ವ್ಹೀಲಿಂಗ್‌ ಹುಚ್ಚಾಟ; ಎಗರಿಬಿದ್ದು ಆಸ್ಪತ್ರೆ ಸೇರಿದ ಯುವಕರು

Exit mobile version