Site icon Vistara News

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

Wild Animal Attack

ಹಾಸನ: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಹಾಸನದ ಬೇಲೂರಿನ ಕಡೆಗರ್ಜೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ (Wild Animal Attack) ಒಂಟಿ ಸಲಗವೊಂದು ಡೆಡ್ಲಿ ಅಟ್ಯಾಕ್ (Elephant Attack) ನಡೆಸಿದೆ.

ಮಹೇಶ್‌ಗೌಡ ಎಂಬುವವರು ಮನೆಯಿಂದ ಕಾಫಿ ತೋಟದೊಳಗೆ ನಡೆದುಕೊಂಡು ಹೋಗುವಾಗ ಕಾಡಾನೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಆನೆಯಿಂದ ತಪ್ಪಿಸಿಕೊಂಡು ಓಡಿದರೂ ಬಿಡದೆ ಘೀಳಿಟ್ಟು ಅಟ್ಟಾಡಿಸಿದೆ. ಬಳಿಕ ಅಲ್ಲಿಂದ ತೋಟದೊಳಗೆ ಇದ್ದ ಮನೆ ಬಳಿ ಓಡಿ ಬಂದ ಮಹೇಶ್‌ಗೌಡ್ರು, ಕೊನೆಗೆ ಮಹಡಿಯ ಮೆಟ್ಟಿಲು ಹತ್ತಲು ಹೋಗಿದ್ದಾರೆ.

ಆದರೆ ಮಳೆ ಬಂದಿದ್ದರಿಂದ ಮೆಟ್ಟಿಲು ಹತ್ತುವಾಗ ಕಾಲು ಜಾರಿದೆ. ಆದರೂ ಮೆಟ್ಟಿಲು ಹತ್ತಿ ಮಹಡಿ ಮೇಲೆ ಹೋಗಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಆದರೆ ಒಂಟಿ ಸಲಗ ಮಾತ್ರ ಮನೆಯ ಬಳಿಯೇ ಕಾಲಿನಿಂದ ಮಣ್ಣು ಕೆರೆಯುತ್ತ ನಿಂತಿತ್ತು. ಮಹಡಿ ಮೇಲೆ ನಿಂತಿದ್ದ ಮಹೇಶ್‌ಗೌಡ್ರು ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ಮಹೇಶ್‌ ಗೌಡ್ರು ಕೈ ಮುಗಿದು ಹೊರಟು ಹೋಗುವಂತೆ ಅಂಗಲಾಚಿದ್ದಾರೆ. ಕೆಲಕಾಲ ಮನೆ ಬಳಿ ನಿಂತು ಘೀಳಿಟ್ಟ ಮದಗಜ ನಂತರ ಕಾಫಿ ತೋಟದ ಒಳಗೆ ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಪಾರಾದ ಮಹೇಶ್‌ಗೌಡ್ರು ಬದುಕಿತು ಬಡಜೀವ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Road Accident: ಓವರ್‌ ಟೇಕ್‌ ತಂದ ಆಪತ್ತು; ಬೇವಿನ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಡೆಂಕಣಿಕೋಟೆಯಲ್ಲಿ ಕಾಡಾನೆ ಎದುರು ಜನರ ಹುಚ್ಚಾಟ

ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆಯಿಂದ ಅಂಚೆಟ್ಟಿಗೆ ಹೋಗುವ ರಸ್ತೆಯಲ್ಲಿ ನಿಂತು ಅಡ್ಡಾಡುತ್ತಿದ್ದ ಆನೆ ಮುಂದೆ ಜನರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಹುಚ್ಚಾಟ ಮೆರೆದಿದ್ದಾರೆ.

ಕಾಡಾನೆಯೊಂದು ಕೆಲ ದಿನಗಳಿಂದ ಕಾಡಂಚಿನ ಗ್ರಾಮದಲ್ಲಿ ಬೀಡು ಬಿಟ್ಟಿದೆ. ನಿನ್ನೆ ಶುಕ್ರವಾರ ಸಂಜೆ ಗ್ರಾಮದ ರಸ್ತೆಯಲ್ಲಿ ಕಾಡಾನೆಯೊಂದು ಠೀಕಾಣಿ ಹಾಕಿ, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಅಡ್ಡಾಡಿಕೊಂಡಿತ್ತು. ಇತ್ತ ಕಾಡಾನೆ ನೋಡಲು ಮುಗಿಬಿದ್ದ ಗ್ರಾಮಸ್ಥರು, ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು. ಜತೆಗೆ ಕಾಡಾನೆ ಹತ್ತಿರ ಹೋಗಿ ಫೋಟೋ ತೆಗೆಯಲು ಮುಂದಾಗಿದ್ದರು. ಇತ್ತ ಸಿಟ್ಟಿಗೆದ್ದ ಆನೆಯು ಜನರ ಕಡೆಗೆ ನುಗ್ಗಿದೆ. ಈ ವೇಳೆ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಯಲ್ಲಾಪುರದಲ್ಲಿ ಮನೆಯ ಅಂಗಳದಲ್ಲಿ ಚಿರತೆ ಓಡಾಟ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಅರಣ್ಯ ವ್ಯಾಪ್ತಿಯ ಶಾಸ್ತ್ರಿಜಡ್ಡಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ನರಸಿಂಹ ಹೆಗಡೆ ಎಂಬುವವರ ಮನೆಯ ಅಂಗಳದಲ್ಲಿ ಬೆಳಗಿನ ಜಾವ ಚಿರತೆ ಓಡಾಡಿದೆ. ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದಿದ್ದು, ತಿನ್ನಲು ಏನೂ ಸಿಗದೇ ಯಾರಿಗೂ ಹಾನಿ ಮಾಡದೇ ವಾಪಸ್‌ ಆಗಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version