ಹಾವೇರಿ: ಶಾಲೆಯ ಮುಂಭಾಗದ ರಸ್ತೆಯಲ್ಲೇ ಯಾರೋ ವಾಮಾಚಾರದ ಕುರುಹುಗಳನ್ನು ಬಿಟ್ಟು ಹೋದ ಘಟನೆ ಹಾವೇರಿಯಲ್ಲಿ ನಡೆದಿದೆ. ರಾತ್ರಿ ಈ ಕೃತ್ಯ ನಡೆಸಲಾಗಿದ್ದು, ಬೆಳಗ್ಗೆ ಶಾಲೆಗೆ ಆಗಮಿಸಿದ ಮಕ್ಕಳು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಸೋಮಲಾಪುರದ ಸರ್ಕಾರಿ ಶಾಲೆ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಈ ಕೃತ್ಯವನ್ನು ಯಾರು ಮಾಡಿದ್ದು ಎನ್ನುವುದು ತಿಳಿದುಬಂದಿಲ್ಲ. ಇವರ ಗುರಿ ಯಾರು ಎನ್ನುವುದು ಕೂಡಾ ಗೊತ್ತಿಲ್ಲ. ಆದರೆ, ವಾಮಾಚಾರ ಕಂಡು ಶಾಲಾ ಮಕ್ಕಳಲ್ಲಿ ಆತಂಕ ಮೂಡಿದೆ. ಹೀಗಾಗಿ ಈ ಕೃತ್ಯ ಎಸಗಿರುವವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಂಭಾಗದ ರಸ್ತೆಯಲ್ಲೇ ಕೋಳಿಯನ್ನು ಕತ್ತು ಹಿಸುಕಿ ಸಾಯಿಸಿ ಎಸೆಯಲಾಗಿದೆ. ಲಿಂಬೆ ಹಣ್ಣುಗಳನ್ನು ಅಲ್ಲಲ್ಲಿ ಎಸೆಯಲಾಗಿದೆ. ಜತೆಗೆ ಕುಂಕುಮವನ್ನೂ ಬಳಸಲಾಗಿದೆ. ನೋಡಿದರೆ ಭಯ ಹುಟ್ಟಿಸುವ ಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಮಕ್ಕಳು ನಡೆದುಕೊಂಡು ಹೋಗುತ್ತಿದ್ದು, ಬೆಳಗ್ಗೆ ಇದನ್ನು ನೋಡಿ ಹೌಹಾರಿದ್ದಾರೆ.
ಯಾಕಿರಬಹುದು: ಈ ರೀತಿ ರಸ್ತೆಯಲ್ಲಿ ಕೋಳಿಯನ್ನು ಕೊಲ್ಲುವುದು, ಲಿಂಬೆ ಹಣ್ಣು, ಕುಂಕುಮ ಚೆಲ್ಲುವುದು ಗ್ರಾಮೀಣ ಭಾಗದಲ್ಲಿ ಹಲವೆಡೆ ಆಚರಣೆಯಲ್ಲಿದೆ. ಮನೆ ಅಥವಾ ತಮ್ಮ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಹೀಗೆ ಮಾಡುವುದು ರೂಢಿಯಲ್ಲಿದೆ. ಇನ್ನು ಕೆಲವು ಕಿಡಿಗೇಡಿಗಳು ಯಾರನ್ನೋ ಗುರಿಯಾಗಿಟ್ಟುಕೊಂಡು ವಾಮಾಚಾರ ಮಾಡುವುದಕ್ಕಾಗಿ ಈ ರೀತಿ ಮಾಡುವುದೂ ಇದೆ.
ಇದನ್ನೂ ಓದಿ| ಕೋಳಿಗೆ ಪ್ರಾಣ ಸಂಕಟ, ಭಕ್ತರಿಗೆ ಆಪತ್ತಿನ ಕಂಟಕ!