ಹಾವೇರಿ: ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರಕ್ಕೆ ಜಿಲ್ಲೆಯ ಎಲ್ಲ ತಹಸಿಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಿಗೆ ಸಾರ್ವಜನಿಕ ಕುಂದುಕೊರತೆ ಸ್ವೀಕಾರ ಪೆಟ್ಟಿಗೆ ಅಳವಡಿಸಿ, ತಿಂಗಳಿಗೊಮ್ಮೆ ಸಾರ್ವಜನಿಕರ ಎದುರು ತೆರೆದು ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ತಿಳಿಸಿದ್ದಾರೆ.
ಬ್ಯಾಡಗಿ ತಹಸಿಲ್ದಾರ್ ಕಚೇರಿ, ತಾಲೂಕು ಪಂಚಾಯತಿ ಕಚೇರಿ ಹಾಗೂ ಪುರಸಭೆ ಕಚೇರಿಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಇದನ್ನೂ ಓದಿ | ಸಿಜೇರಿಯನ್ ಬಳಿಕ ಸೋಂಕು: ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ತಹಸಿಲ್ದಾರ್ ಕಚೇರಿಯ ವಿವಿಧ ವಿಷಯ ನಿರ್ವಾಹಕರ ಕಡತವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿದರು. ನಿವೃತ್ತ ಸೈನಿಕರಿಗೆ ಜಮೀನು ಮಂಜೂರಾತಿ ಕುರಿತಂತೆ ಸ್ವೀಕರಿಸಿದ ಅರ್ಜಿಗಳು ಹಾಗೂ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿ ಜಮೀನು ಮಂಜೂರಾತಿಗೆ ಅನುಸರಿಸುವ ಮಾನದಂಡಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.
ಸಮಸ್ಯೆಗಳು, ಕುಂದುಕೊರತೆಗಳ ನಿವಾರಣೆಗಾಗಿ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಬಗ್ಗೆ ಚಿಂತನೆ ಇರಲಿ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ಎಲ್ಲ ಇಲಾಖಾ ಅಧಿಕಾರಿಗಳು ಗಮನಹರಿಸಿ ಕೆಲಸಮಾಡಿ ಎಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಬೆಳೆವಿಮೆ ಹಾಗೂ ಬೆಳೆ ಪರಿಹಾರ ಹಣ ಮಿಸ್‍ಮ್ಯಾಚ್ ಕಾರಣ ನಿಜವಾದ ಫಲಾನುಭವಿಗೆ ತಲುಪದೇ ಬೇರೆ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಹಣ ಹೋಗಿರುವ ಕುರಿತಂತೆ ಸಾರ್ವಜನಿಕರೊಬ್ಬರ ದೂರುಗಳ ಹಿನ್ನೆಲೆಯಲ್ಲಿ ಒಂದು ವಾರದೊಳಗಾಗಿ ಪರಿಶೀಲನೆ ನಡೆಸಿ ನೈಜ ಫಲಾನುಭವಿಗಳಿಗೆ ಪರಿಹಾರ ಹಣ ಪಾವತಿಗೆ ಕ್ರಮವಹಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಅವರಿಗೆ ಸೂಚನೆ ನೀಡಿದರು.
ಬೆಳೆವಿಮೆ ನೋಂದಣಿಗೆ ನೆರವಾಗಲು ಅನುಕೂಲವಾಗುವಂತೆ ಹೆಲ್ಪ್‌ಡೆಸ್ಕ್‌ಗಳ ಸಂಪರ್ಕ ಸಂಖ್ಯೆಯನ್ನು ಕೃಷಿ ಇಲಾಖೆ ಸೇರಿದಂತೆ ತಹಶೀಲ್ದಾರ ಕಚೇರಿ ಹೊರ ಆವರಣದಲ್ಲಿ ನಾಮಫಲಕ ಅಳವಡಿಸುವಂತೆ ಸೂಚನೆ ನೀಡಿದರು.
ತಹಸಿಲ್ದಾರ್ ಕಚೇರಿ, ಪುರಸಭೆ ಹಾಗೂ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಕಲ್ಪಿಸಿರುವ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಹಾಗೂ ಕಚೇರಿಯ ಸ್ವಚ್ಛತೆ ಕುರಿತಂತೆ ಪರಿಶೀಲನೆ ನಡೆಸಿ ಒಂದು ವಾರದ ಗಡುವಿನಲ್ಲಿ ಸುಧಾರಣೆ ಕೈಗೊಳ್ಳದಿದ್ದರೆ ನೋಟೀಸ್ ನೀಡುವ ಎಚ್ಚರಿಕೆ ನೀಡಿದರು. ಕಚೇರಿಯ ವಿಭಾಗವಾರು ವಿಷಯ ನಿರ್ವಾಹಕರ ಹೆಸರು ಹಾಗೂ ನಿರ್ವಹಣೆ ಮಾಡುವ ಕಾರ್ಯಗಳ ಕುರಿತಂತೆ ಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.
ಇದನ್ನೂ ಓದಿ| ನರೇಗಾ ಕೆಲಸ ಕೊಡಲು ವಿಳಂಬ ಮಾಡಿದ್ದಕ್ಕೆ ಕಚೇರಿಯಲ್ಲಿ ದಾಂಧಲೆ