ಸುರೇಶ್ ನಾಯ್ಕ, ಹಾವೇರಿ
ರಾಜ್ಯ, ಅಂತಾರಾಜ್ಯ ಮಟ್ಟದ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಜಿಲ್ಲೆಯ ಆರು ವರ್ಷದ ಬಾಲಕ, ಮೇ 28ರಂರಿಂದ ನೇಪಾಳದ ಕಠ್ಮಂಡುವಿನ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದಾನೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಬಾಲಕ ಮಹಮ್ಮದ್ ಜೈದ್ ಪ್ರತಿಭಾವಂತನಾಗಿದ್ದು, ವಿವಿಧೆಡೆ 10 ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ. ಈತನ ಸಾಧನೆಗೆ ತಂದೆ ಅಸೀಫ್ ಅಲಿಯೇ ಮಾರ್ಗದರ್ಶಕರು. ಮೂರೂವರೆ ವರ್ಷದಿಂದ ಐದು ಕಿ.ಮೀ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಈ ಬಾಲಕ ಹಿಂತಿರುಗಿ ನೋಡಿಲ್ಲ. ಅಲ್ಲಿಂದ ಆರಂಭವಾದ ಇವನ ಪಯಣ ಇಂದಿಗೂ ಮುಂದುವರಿಯುತ್ತಿದ್ದು, ಸೌಥ್ ಏಶಿಯನ್ ಫೆಡರೇಷನ್ ಆಯೋಜಿಸಿರುವ ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ತಾಲೀಮು ನಡೆಸುತ್ತಿದ್ದಾನೆ.
ನಿರಂತರ ಅಭ್ಯಾಸ
ನಿತ್ಯ ಮುಂಜಾನೆ ಹಾಗೂ ಸಂಜೆ ವ್ಯಾಯಾಮ ಮಾಡುವ ಮಹಮ್ಮದ್ 10 ಕಿ.ಮೀ ಓಡುತ್ತಾನೆ. ಈತನ ಸಾಧನೆ ಹಿಂದೆ ನಿಂತವರು ತಂದೆ ಅಸೀಫ್ ಅಲಿ. ಇವರು 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತಿ ನಂತರ ದೈಹಿಕ ನ್ಯೂನತೆ ಕಾಡಿದ್ದರಿಂದ ಸಾಧನೆ ಮಾಡಲು ಅಡಚಣೆಯಾಯಿತು. ಇದರಿಂದ ವಿಚಲಿತರಾಗದೆ ಅಸೀಫ್ ಅವರು ಮಗನಿಗೆ ಮ್ಯಾರಥಾನ್‌ಗಾಗಿ ವಿಶೇಷ ತರಬೇತಿ ನೀಡುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣ, ಗ್ರಾಮದ ಹೊರವಲಯದ ರಸ್ತೆಗಳಲ್ಲಿ ಮಹಮ್ಮದ್‌ಗೆ ತರಬೇತಿ ನೀಡುತ್ತಿದ್ದಾರೆ. ಬಾಲಕನ ಸಾಧನೆಗೆ ಕಾಗಿನೆಲೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಹುಮುಖ ಪ್ರತಿಭೆ
ಮಹಮ್ಮದ್ ಮ್ಯಾರಥಾನ್ ಮಾತ್ರವಲ್ಲದೆ ಯೋಗ, ಕರಾಟೆ, ಜೂಡೋ, ಈಜು ಸೇರಿ ವಿವಿಧ ರೀತಿಯ ಕಸರತ್ತು ಸಹ ಮಾಡುತ್ತಾನೆ. ನಿತ್ಯ ಹಾವೇರಿ ಜಿಲ್ಲಾ ಕ್ರೀಡಾಂಗಣಕ್ಕೆ ಬರುವ ಬಾಲಕನಿಗೆ ಕ್ರೀಡಾಪಡುಗಳು ಶುಭಾಶಯ ಕೋರುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡುತ್ತಿರುವ ಬಾಲಕ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಮ್ಯಾರಥಾನ್‌ನಲ್ಲಿ ಉತ್ತಮ ಸಾಧನೆ ಮಾಡಲಿ, ಆ ಮೂಲಕ ರಾಜ್ಯ, ದೇಶ, ಜಿಲ್ಲೆಗೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.
ಇದನ್ನೂ ಓದಿ | ರೈತರನ್ನು ಆಕರ್ಷಿಸುತ್ತಿರುವ ಹೊಸ ಬೆಳೆ ಡ್ರ್ಯಾಗನ್ ಫ್ರೂಟ್