Site icon Vistara News

Haveri News: ಪ್ರೀತಿಸಿ ಮೋಸ ಮಾಡಿದ ಪ್ರಿಯಕರ; ನೀನೇ ಬೇಕೆಂದು ಮನೆ ಮುಂದೆ ಧರಣಿಗೆ ಕುಳಿತ ಪ್ರಿಯತಮೆ!

#image_title

ಮುಂಡಗೋಡ: ತನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ (Haveri News) ಯುವತಿಯೊಬ್ಬಳು ತಾಲೂಕಿನ ಮೈನಳ್ಳಿ ಗ್ರಾಮದ ಯುವಕನ ಮನೆ ಎದುರು ಮಂಗಳವಾರ ಧರಣಿ ನಡೆಸಿದ ಘಟನೆ ಜರುಗಿದೆ.

ಮೈನಳ್ಳಿ ಗ್ರಾಮದ ಪ್ರಸಾದ ಕಲಾಲ (ಬದನಕರ) (22) ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಟ್ರೈನಿಂಗ್‌ಗೆ ಹೋದಾಗ ಕಾಂಡೇಬಾಗೂರ ಗ್ರಾಮದ 19 ವರ್ಷದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಸ್ನೇಹ ಪ್ರೀತಿಗೆ ತಿರುಗಿ ನಂತರ ಇಬ್ಬರೂ ಜತೆಯಾಗಿಯೇ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಾರೆ. ಒಂದು ವರ್ಷದವರೆಗೆ ಇವರ ಪ್ರೇಮ ಮುಂದುವರಿದಿದೆ. ಯುವತಿ ಮನೆಯವರು ಮದುವೆ ಮಾತುಕತೆಗೆ ಬಂದಾಗ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ. ನಂತರ ಯುವತಿಯಿಂದ ದೂರವಾಗಿದ್ದಾನೆ. 

ಇದನ್ನೂ ಓದಿ: Karnataka Election Result: ‘ನಿಮ್ಮವ, ನಿಮ್ಮ ಪ್ರೀತಿಯ ಮನೆ ಮಗ’; ಸೋತ ಬಳಿಕ ಪತ್ರ ಬರೆದ ಸಿಟಿ ರವಿ, ಸುಧಾಕರ್​

ಈ ವಿಚಾರದಲ್ಲಿ ಮನನೊಂದ ಯುವತಿಯು ಯುವಕನ ಮನೆ ಎದುರು ಧರಣಿ ನಡೆಸಿದ್ದಾಳೆ. ಅದನ್ನು ಕಂಡು ಹುಡುಗನ ಮನೆಯವರು ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ಯುವತಿಗೆ ಘಟನೆ ನಡೆದ ಸ್ಥಳದಲ್ಲಿ ದೂರು ನೀಡುವಂತೆ ತಿಳಿಸಲಾಗಿದೆ.

ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸಂಜೆಯಾಗಿರುವುದರಿಂದ ಯುವತಿಗೆ ಸಾಂತ್ವನ ಕೇಂದ್ರದಲ್ಲಿ ಉಳಿಯುವಂತೆ ಹೇಳಿದ್ದಾರೆ. ಆದರೆ, ಇದನ್ನು ನಿರಾಕರಣೆ ಮಾಡಿರುವ ಯುವತಿ, ಯುವಕನ ಮನೆ ಮುಂದೆಯೇ ಇರುತ್ತೇನೆ, ಗ್ರಾಮಸ್ಥರು ನನಗೆ ಸಹಕಾರ ನೀಡುತ್ತಾರೆ. ನಾನು ಎಲ್ಲಿಗೂ ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ನಂತರ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯುವತಿಯ ಮನವೊಲಿಸಿ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ: ವಜ್ರಮುನಿ ಸಿನಿಮಾದಲ್ಲಷ್ಟೇ ಖಳ, ನಿಜ ಬದುಕಲ್ಲಿ ಅಪ್ಪಟ ವಜ್ರ!

“ಯುವಕ ಮತ್ತು ಯುವತಿ ಕಡೆಯವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಪೊಲೀಸ್ ದೂರಿನಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಯುವತಿಯ ಭವಿಷ್ಯದ ಪ್ರಶ್ನೆ ಇದೆ. ನಾವೂ ಯುವಕನ ಕುಟುಂಬದವರಿಗೆ ಮನವೊಲಿಸುವ ಪ್ರಯತ್ನ ಮಾಡುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರ ತಿಳಿಸಿದರು.

Exit mobile version