ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದ ಹೊರವಲಯದಲ್ಲಿರೋ ಕುರಿ ದೊಡ್ಡಿಯಲ್ಲಿ ಕುರಿ ಕಳ್ಳತನ ಮಾಡಲು ಬಂದು ರೈತನನ್ನು ಹತ್ಯೆ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 48 ವರ್ಷದ ರೈತ ವೆಂಕಟೇಶ ಮತ್ತೂರ ಅವರ ಕೈಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿ ಆಗಿದ್ದರು.
ಆರೋಪಿಗಳು ಕುರಿ ಕಳ್ಳತನಕ್ಕೆ ಬಂದಿದ್ದರು. ಮಾಲೀಕ ಕುರಿಗಳ ಕಾವಲುಗಾರನಾಗಿ ಕುರಿ ದೊಡ್ಡಿಯಲ್ಲೇ ಮಲಗಿದ್ದ. ಮಲಗಿದ್ದ ವೆಂಕಟೇಶ ಅವರ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಆತನನ್ನು ಹತ್ಯೆ ಮಾಡಿ ಕುರಿಗಳನ್ನು ಕದ್ದುಕೊಂಡು ಹೋಗಿದ್ದರು.
ಇದನ್ನೂ ಓದಿ | ಹಾವೇರಿ ‘ಹೊಂಡ’ ಸಿಟಿ; ರಸ್ತೆಯಲ್ಲಿ ಗಾಡಿ ಪಲ್ಟಿ!
ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ವೆಂಕಟೇಶನ ಹತ್ಯೆಯ ಸುದ್ದಿ ಗ್ರಾಮದ ತುಂಬಾ ಹಬ್ಬಿತು. ಎಸ್‌ಪಿ ಹನುಮಂತರಾಯ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಸೇರಿ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕುರಿ ಕಳ್ಳತನಕ್ಕೆ ಬಂದವರೆ ರೈತನನ್ನು ಹತ್ಯೆ ಮಾಡಿರಬಹುದು ಎನ್ನುವ ಅನುಮಾನ ಪ್ರಾಥಮಿಕ ತನಿಖೆ ವೇಳೆಯಲ್ಲೆ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಆರೋಪಿಗಳ ಪತ್ತೆಯ ಜತೆಗೆ ರಾತ್ರಿ ಗಸ್ತು ಹೆಚ್ಚಿಸಿದ್ದರು. ಸಂಶಯಾಸ್ಪದ ರೀತಿಯಲ್ಲಿ ಬ್ರಿಡ್ಜ್ ವೊಂದರ ಕೆಳಗೆ ಕೆಲವರು ನಿಂತಿದ್ದು ಕಂಡುಬಂದಿತ್ತು. ಅವರನ್ನು ಕಂಡು ಅನುಮಾನಗೊಂಡಿದ್ದ ರಾಣೆಬೆನ್ನೂರು ಗ್ರಾಮೀಣ ಠಾಣೆ ಸಿಪಿಐ ಮೋತಿಲಾಲ ಪವಾರ ಮತ್ತವರ ತಂಡ, ಉಪೇಂದ್ರ ಮೋಡಿಕ್ಯಾರ ಮತ್ತು ಮಂಜುನಾಥ ಅಲಿಯಾಸ್ ಮಂಜ್ಯಾ ಕೊಂಚಿಕೊರವರ ಎಂಬಾತನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಕೆಲಹೊತ್ತು ವಿಚಾರಣೆ ನಡೆಸಿದ ನಂತರ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಕುರಿ ಕಳ್ಳತನ ಮಾಡಲು ಬಂದಿದ್ದೆವು, ಈ ಸಮಯದಲ್ಲಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಲ್ಲಿವರೆಗೆ ನಾಲ್ವರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ಎರಡು ಬೊಲೆರೋ ವಾಹನಗಳು, ಎರಡು ಕಬ್ಬಿಣದ ರಾಡುಗಳು, ಕಟರ್, ಪಕ್ಕಡ್, ಎರಡು ಹಗ್ಗ, ಬಿಯರ್ ಬಾಟಲಿಗಳು, ಖಾರದಪುಡಿ ಸೇರಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ| ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !