Site icon Vistara News

Ranebennur News: ಆಧುನಿಕ ವಿಜ್ಞಾನಕ್ಕೆ ಶಂಕರಾಚಾರ್ಯರು ನೀಡಿದ ಕೊಡುಗೆ ಅಪಾರ; ವಿ. ನವೀನಶಾಸ್ತ್ರಿ ರಾ. ಪುರಾಣಿಕ

Acharya Shankara Jayanthyutsava programme at Ranebennur

ರಾಣೆಬೆನ್ನೂರು: ಆಧುನಿಕ ವಿಜ್ಞಾನಕ್ಕೆ ಶಂಕರಾಚಾರ್ಯರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ (Ranebennur News) ತಿಳಿಸಿದರು.

ನಗರದಲ್ಲಿ ಆಚಾರ್ಯ ಶಂಕರರ ಜಯಂತ್ಯುತ್ಸವದ 2ನೇ ದಿನದ ಅದ್ವೈತ ವೇದಾಂತದಲ್ಲಿ ಶಂಕರಾಚಾರ್ಯರು ತಿಳಿಸಿರುವ ಆಧುನಿಕ ವಿಜ್ಞಾನದ ಅಂಶಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ವಿಶ್ವ ಸೃಷ್ಟಿಯ ಕಾರಣದ ಹುಡುಕಾಟದಲ್ಲಿ ವೇದಾಂತವು ಬುದ್ಧಿ ಮತ್ತು ಪ್ರಜ್ಞೆಗಳನ್ನು ತೊಡಗಿಸುವುದಲ್ಲದೆ, ಸಮಸ್ತ ವಸ್ತು ಪ್ರಪಂಚವನ್ನೂ ಸೇರಿಸಿಕೊಳ್ಳುತ್ತದೆ. ವಸ್ತುವಿನ ಗುಣಧರ್ಮಗಳನ್ನು ಕಂಡುಹಿಡಿಯುವುದೇ ಭೌತವಿಜ್ಞಾನಿಯ ಪರಮಗುರಿ. ಆದ್ದರಿಂದ ವೇದಾಂತ ವಿಜ್ಞಾನ ಮತ್ತು ಭೌತ ವಿಜ್ಞಾನಗಳು ಒಂದನ್ನೊಂದು ಸಹಜವಾಗಿಯೇ ಅವಲಂಬಿಸಿವೆ. ಇದು ಕೇವಲ ತೋರಿಕೆಯದಾಗಿರದೆ ಯಾವುದೋ ಮೂಲಭೂತ ತತ್ವವನ್ನು ಆಧರಿಸಿದೆ ಎಂದರು.

ಇದನ್ನೂ ಓದಿ: Job Alert: ಗಮನಿಸಿ; ಬಿಎಂಟಿಸಿಯ 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನ

ಶಂಕರಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಪ್ರಬಲವಾಗಿ ಕಾಣುವ “ವಸ್ತು-ತಂತ್ರ” ಜ್ಞಾನ ತತ್ವವು ಅದ್ವೈತ ವೇದಾಂತದಲ್ಲಿ ಎಂತಹ ಪರಿಣಾಮ ಉಂಟುಮಾಡಿದೆ ಎಂಬ ವಿಚಾರಕ್ಕೆ ತೊಡಗಿದಾಕ್ಷಣ ಅದು ನಮ್ಮನ್ನು ಅಧ್ಯಾತ್ಮ ವಿದ್ಯೆ ಎಂಬ ಸಮುದ್ರದ ಆಳಕ್ಕೆ ಕೊಂಡೊಯ್ಯುತ್ತದೆ. ಭೌತಶಾಸ್ತ್ರದ “ವಸ್ತು ನಿಷ್ಠತೆಯ ತತ್ವ” ಮತ್ತು ವೇದಾಂತ ಶಾಸ್ತ್ರದ “ವಸ್ತು-ತಂತ್ರ” ಇವೆರಡೂ ವಸ್ತುವನ್ನು ಕುರಿತಾಗಿ ಇರುವ ನಮ್ಮ ಜ್ಞಾನದಿಂದ ವ್ಯಕ್ತಿ ನಿಷ್ಠ ಗುಣಧರ್ಮಗಳನ್ನು ಹೋಗಲಾಡಿಸಲು ರಚಿಸಲ್ಪಟ್ಟಿವೆ. ಅವೆರಡೂ ಒಂದೇ ವರ್ಗಕ್ಕೆ ಸೇರುತ್ತವೆ.

ಹೊರಜಗತ್ತಿನಲ್ಲಿ ಕಾಣುವ ಕೆಲವೊಂದು ಚಮತ್ಕಾರಗಳನ್ನು ವಿಜ್ಞಾನವು ಅಭ್ಯಾಸ ಮಾಡಿ ಹೇಗೆ ವರ್ಗಿಕರಿಸಿದೆಯೋ ಹಾಗೆಯೇ ತಮ್ಮ ಮೊದಲನೇ ಹಂತದ ಬೆಳವಣಿಗೆಯಲ್ಲಿ ನ್ಯಾಯ, ವೈಶೇಷಿಕ, ಸಾಂಖ್ಯ ಮುಂತಾದ ವೇದಾಂತ ಶಾಸ್ತ್ರಗಳೂ ಕೂಡ ತಮ್ಮ ಅಧ್ಯಯನದಲ್ಲಿ ವಸ್ತುವಿನ ಹೊರ ಆವರಣದ ಗುಣಧರ್ಮಗಳನ್ನೇ ಸೂಚಿಸುತ್ತವೆ. ಉದಾಹರಣೆಗೆ ವೈಶೇಷಿಕದ ಅಣುವಿಜ್ಞಾನ ಮತ್ತು ಸಾಂಖ್ಯದ ಪ್ರಕೃತಿಯ ಕಲ್ಪನೆ ಅಥವಾ ಮೂಲಪ್ರಕೃತಿಯ ಸ್ವಭಾವ ಇವೆರಡೂ ಮೂಲತಃ ವಸ್ತುವಿನ ಸ್ವಭಾವದ ಮೇಲೆ ಆಧಾರಿತವಾಗಿವೆ. ನ್ಯಾಯ, ವೈಶೇಷಿಕ ಮತ್ತು ಸಾಂಖ್ಯ ಮುಂತಾದ ದರ್ಶನ ಶಾಸ್ತ್ರಗಳು ತಮ್ಮ ಮುಂದಿನ ಬೆಳವಣಿಗೆಯ ಮಾರ್ಗದಲ್ಲಿ ಒಂದೇ ಆದ ಸಮಗ್ರ ವೇದಾಂತ ಶಾಸ್ತ್ರವಾಗಿ ತನ್ನ ಬೆಳವಣಿಗೆಯ ವಿವಿಧ ಹಂತವನ್ನು ದಾಟಿಹೋಗುವುದನ್ನು ನಾವು ನೋಡುತ್ತಿದ್ದೇವೆ. ಆದಿಶಂಕರರಿಂದ ವಸ್ತುನಿಷ್ಠತೆಯ ತತ್ವವು ತರ್ಕಬದ್ಧವಾದ ಅಂತಿಮ ಗುರಿಯ ಕಡೆಗೆ ಕೊಂಡೊಯಲ್ಪಟ್ಟಿತು ಎಂದು ಬ್ರಹ್ಮ ಸೂತ್ರದ ಅನೇಕ ಸೂತ್ರಗಳನ್ನು ಉದಾಹರಿಸಿ, ಶಂಕರರ ಶ್ರೀಚಕ್ರ ವಿವರಣೆಯನ್ನು ಅವರು ತಮ್ಮ ಉಪನ್ಯಾಸದಲ್ಲಿ ನೀಡಿದರು.

ಇದನ್ನೂ ಓದಿ: Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

ಈ ಸಂದರ್ಭದಲ್ಲಿ ಅರುಣಕುಮಾರ ಮುದ್ರಿ, ಆನಂದ ನಾಯಕ, ಶ್ರೀನಿವಾಸ ಜೋಶಿ, ಗುರುರಾಜ ಕುಲಕರ್ಣಿ, ರವಿ ಕಾಶಿಕರ, ವೀಣಾ ಮುದ್ರಿ, ವೇದಾ ವರಗೇರಿ ಸೇರಿದಂತೆ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version