ಹಾವೇರಿ: ಉತ್ತರ ಕರ್ನಾಟಕ ಭಾಗದ ಹೋರಿ ಹಬ್ಬದ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ರಾಕ್ ಸ್ಟಾರ್ 105 ಹೋರಿ (Rockstar Bull) ನಿಧನವಾಗಿದೆ. ಈ ಹೋರಿ ನಿಧನಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿ ಜಿಲ್ಲೆಯ ರಾಕ್ ಸ್ಟಾರ್ 105 ಹೋರಿಯು ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ಇದು ಕಳೆದ 1 ವರ್ಷದಿಂದ ಯಾವುದೇ ಹಬ್ಬದಲ್ಲಿ ಭಾಗಿಯಾಗುತ್ತಿರಲಿಲ್ಲ. ಈಗ ರಾಕ್ ಸ್ಟಾರ್ ನಿಧನ ಸುದ್ದಿ ತಿಳಿದು ಲಕ್ಷಾಂತರ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹಾವೇರಿ ನಗರದಲ್ಲಿ ಇಂದು ರಾಕ್ ಸ್ಟಾರ್‌ನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಹಾವೇರಿಯ ಚಿಕ್ಕಪ್ಪ ಅಜ್ಜಪ್ಪ ಮಾರುತಿ ಎನ್ನುವವರಿಗೆ ಸೇರಿದ ಹೋರಿ ಇದಾಗಿದೆ.
ಸ್ಪರ್ಧೆಗಿಳಿದರೆ ಮೊದಲ ಬಹುಮಾನ ಫಿಕ್ಸ್!
ಹಲವು ವರ್ಷಗಳಿಂದ ಅಖಾಡಕ್ಕೆ ಇಳಿದು ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದ ರಾಕ್ ಸ್ಟಾರ್ ಮಿಂಚಿನ ಓಟಕ್ಕೆ ಹೋರಿ ಹಬ್ಬದ ಬಹುಮಾನ ಫಿಕ್ಸ್ ಆಗಿತ್ತು. ಹಾವೇರಿ ನಗರದ ನಾಗೇಂದ್ರನ ಮಟ್ಟಿಯಲ್ಲಿ 25ನೇ ವರ್ಷದ ಹುಟ್ಟುಹಬ್ಬವನ್ನು ರಾಕ್ ಸ್ಟಾರ್ ಹೋರಿ ಆಚರಿಸಿಕೊಂಡಿತ್ತು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೇಸರ
ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಏಪ್ರಿಲ್ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್ ಶೋ
ಈ ಕುರಿತು ಟ್ವೀಟ್ ಮಾಡಿರುವ ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ರಾಕ್ ಸ್ಟಾರ್ ಹೋರಿ ಜನಪ್ರಿಯವಾಗಿತ್ತು. ಅಗಲಿದ ಅಭಿಮಾನಿಗಳ ನೆಚ್ಚಿನ ರಾಕ್ ಸ್ಟಾರ್‌ಗೆ ಅಂತಿಮ ನಮನಗಳು. ಮುಂದಿನ ಜನ್ಮದಲ್ಲಿ ಹೋರಿ ಹಬ್ಬದ ತವರೂರಾಗಿರುವ ಹಾವೇರಿಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.