Site icon Vistara News

ಸನಾತನ ಪರಂಪರೆಗೆ ಶ್ರೀ ರಾಜವಂದ್ಯ ತೀರ್ಥರ ಕೊಡುಗೆ ಅಪಾರ: ಭಂಡಾರಕೇರಿ ವಿದ್ಯೇಶತೀರ್ಥ ಸ್ವಾಮೀಜಿ

Vidyesha Thitha Swamiji

ಹಾವೇರಿ: ಭಾರತೀಯ ಸನಾತನ ಧರ್ಮ ಮತ್ತು ಮಾಧ್ವ ವೇದಾಂತ ಕ್ಷೇತ್ರಕ್ಕೆ ಶ್ರೀ ರಾಜವಂದ್ಯ ತೀರ್ಥರ ಕೊಡುಗೆ ದೊಡ್ಡದು ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

ಕಾಗಿನೆಲೆಯ ಆದಿಕೇಶವ ದೇವಸ್ಥಾನದ ಆವರಣದಲ್ಲಿನ ಭಂಡಾರಕೇರಿ ಮಠದ ಪರಂಪರೆಯ ಹಿರಿಯ ಯತಿ ಶ್ರೀ ರಾಜವಂದ್ಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಆರಾಧನಾ ಉತ್ಸವ ನೆರವೇರಿಸಿ ಆಶೀರ್ವಚನ ನೀಡಿದರು.

ಕಾಗಿನೆಲೆಯು ಶ್ರೀ ಆದಿಕೇಶವ ಮತ್ತು ನರಸಿಂಹದೇವರ ವಿಶೇಷ ಸನ್ನಿಧಾನವಿರುವ ಪುಣ್ಯ ಕ್ಷೇತ್ರ. ಇದೇ ದೈವಿಕ ಪರಿಸರದಲ್ಲಿ ಭಕ್ತ ಕನಕದಾಸರು ಭಗವಂತನ ಸೇವೆಯನ್ನು ಮಾಡಿ, ಅನುಗ್ರಹ ಪಡೆದು ಹರಿದಾಸ ಪಂಥಕ್ಕೆ ಅಮೋಘ ಸಾಹಿತ್ಯ ಸೇವೆ ಸಲ್ಲಿಸಿದರು. ಇಂಥ ದೇಗುಲದ ಆವರಣದಲ್ಲೇ ನಮ್ಮ ಪರಂಪರೆಯ ಹಿರಿಯ ಸನ್ಯಾಸಿಗಳಾದ ಶ್ರೀ ರಾಜವಂದ್ಯ ತೀರ್ಥರು ಸಂಚಾರಕ್ಕೆ ಬಂದ ಸಂದರ್ಭದಲ್ಲಿ ವೃಂದಾವನಸ್ಥರಾದರು. ಹಲವಾರು ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆ ಯಲ್ಲೇ ಸಂಚರಿಸಿ, ಅಖಂಡವಾಗಿ ಸಂಸ್ಥಾನ ಪ್ರತಿಮೆಗಳ ಪೂಜೆ, ಧರ್ಮ ಜಾಗೃತಿ, ವೇದಾಂತ ಪ್ರಚಾರ ಮತ್ತು ಸಾತ್ವಿಕ ಸಂದೇಶ ನೀಡಿದ್ದ ಅವರು ಸಮಾಜಕ್ಕೆ ಬಹು ಮೌಲ್ಯಯುತ ಕೊಡುಗೆಗಳನ್ನು ದಯಪಾಲಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕ ಎಂದರು.

ಇದನ್ನೂ ಓದಿ | ತತ್ತ್ವ ಶಂಕರ: ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು…

ಇತ್ತೀಚೆಗೆ ನಡೆದ ಉತ್ಖನನ ಮತ್ತು ಸಂಶೋಧನೆಗಳಿಂದ ಗುರುಗಳ ಈ ವೃಂದಾವನ ಪತ್ತೆಯಾಗಿರುವುದು ವಿಶೇಷ.
ಈ ತಾಣವನ್ನು (ಶಿಲಾಮಂಟಪ) ನವೀಕರಣಗೊಳಿಸಿದ್ದು, ಇಂದು ಅದು ಸೇವೆಗೆ ಸಮರ್ಪಣೆಯಾಗಿದೆ. ನಾಡಿನ ಸಂಸ್ಕೃತಿ ಮತ್ತು ಮಾಧ್ವ ಪರಂಪರೆ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶ್ರೀ ವಿದ್ಯೇಶ ತೀರ್ಥರು ಹೇಳಿದರು.

ದಾಸ ಸಾಹಿತ್ಯದ ಮಹತ್ವ ಕಾಪಾಡಿ

ಕನ್ನಡ ಸಾಹಿತ್ಯದಲ್ಲೇ ವಿಶೇಷ ಸ್ಥಾನಗಳಿಸಿರುವ ದಾಸ ಸಾಹಿತ್ಯಕ್ಕೆ ಕನಕದಾಸರು ಮೌಲ್ಯಯುತ ಪದ, ಪದ್ಯಗಳನ್ನು ನೀಡಿದ್ದಾರೆ. ಹಾಗಾಗಿ ನಾವು ಕನಕದಾಸರ ಸಾಹಿತ್ಯ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕನಕದಾಸರು ರಚಿಸಿದ ದೇವರನಾಮಗಳು ಎಲ್ಲ ಜನರಿಗೂ ತಲುಪುವಂತೆ ಚಟುವಟಿಕೆಗಳನ್ನು ಆಯೋಜಿಸಬೇಕು. ಕನಕದಾಸರು ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ಮತ್ತು ಅವರ ಸಾಹಿತ್ಯ ನಮ್ಮ ನಾಡಿನ ಬಹುದೊಡ್ಡ ಆಸ್ತಿ. ಸರ್ಕಾರ ಈ ನಿಟ್ಟಿನಲ್ಲಿ ಬಹುವಿಧ ಕಾರ್ಯಯೋಜನೆ ಹಮ್ಮಿಕೊಂಡು ಕನಕ ಸಾಹಿತ್ಯದ ಅರಿವು ಆಂದೋಲನ ನಡೆಸಬೇಕು ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಇದನ್ನೂ ಓದಿ | ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ

ಜನರಲ್ಲಿ ಧಾರ್ಮಿಕ ಶ್ರದ್ಧೆ, ಆಚಾರ, ಭಕ್ತಿ ಮತ್ತು ದೈವದ ಮೇಲಿನ ನಂಬಿಕೆಗಳು ಹೆಚ್ಚಾದರೆ ಶಾಂತ- ಸಮೃದ್ಧ ಸಮಾಜ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಸರ್ಕಾರ- ಮಠ, ಮಂದಿರಗಳ ಮುಖ್ಯಸ್ಥರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅವರು ನುಡಿದರು.

ಇದೇ ವೇಳೆ ಗುರುಗಳ ದರ್ಶನಕ್ಕಾಗಿ ಕಾಗಿನೆಲೆಗೆ ಬಂದಿದ್ದ ಶಾಸಕ ಶಿವಣ್ಣನವರ್ ಅವರಿಗೆ ಶ್ರೀಗಳು ಫಲ ಸಮರ್ಪಿಸಿ ಗೌರವಿಸಿದರು. ನಂತರ ಸಂಸ್ಥಾನ ದೇವರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

Exit mobile version