ಹಾವೇರಿ: ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಶುರುವಾಗಿದೆ. ಶಿಕ್ಷಕರ ಯಡವಟ್ಟಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ (SSLC Exam 2024) ಹಾಲ್ ಟಿಕೆಟ್ (Hall Ticket) ಸಿಗದೇ ಕಂಗಲಾಗಿದ್ದಾನೆ. ಹಾವೇರಿ ಜಿಲ್ಲೆ ರಾಣೆಬೇನ್ನೂರ ತಾಲುಕಿನ ಹರನಗಿರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ಎಂಬಾತನಿಗೆ ಶಿಕ್ಷಕರು ಪ್ರವೇಶ ಪತ್ರ ನೀಡಿಲ್ಲ.
ಅಭಿಷೇಕ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಲರ್ಜಿ ಮೊಡವೆಗೆ ತುತ್ತಾಗಿದ್ದರಿಂದ ಅಭಿಷೇಕ್ ಶಾಲೆಗೆ ಬಾರದೆ ಆಸ್ಪತ್ರೆ ಸೇರಿದ್ದ. ಇತ್ತ ಹಾಜರಾತಿ ಕೊರತೆಯ ಕಾರಣ ನೀಡಿ ಪ್ರವೇಶ ಪತ್ರವನ್ನು ಕೊಡಲು ಶಿಕ್ಷಕರು ನಿರಾಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಷೇಕ್ ಹಾಗೂ ಆತನ ಪೋಷಕರು ಮುಖ್ಯ ಶಿಕ್ಷಕರ ವಿರುದ್ಧ ಪ್ರತಿಭಟಿಸಿದರು. ಹಾವೇರಿ ಡಿಸಿ ಕಚೇರಿ ಎದುರು ಅಣಕು ಪರೀಕ್ಷೆ ಬರೆದು ಅಭಿಷೇಕ್ ಪ್ರತಿಭಟಿಸಿದ್ದಾನೆ. ಮಗನ ಭವಿಷ್ಯ ನೆನೆದು ಪಾಲಕರು ಕಣ್ಣೀರು ಹಾಕಿದ್ದರು. ಇದೇ ವೇಳೆ ಡಿಡಿಪಿಐ ಸುರೇಶ್ ಹುಗ್ಗಿ ಮತ್ತು ಎಡಿಸಿ ವೀರಮಲ್ಲಪ್ಪ ಪೂಜಾರ್‌ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರ ದುರಂತ ಅಂತ್ಯ
ಮಗನ ಜತೆಗೆ SSLC ಎಕ್ಸಾಂ ಬರೆಯುತ್ತಿರುವ ಅಮ್ಮ
ಯಾದಗಿರಿ/ಬಾಗಲಕೋಟೆ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯು (SSLC Exam 2024) ಆರಂಭವಾಗಿದೆ. ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆಯನ್ನು ಮಕ್ಕಳು ಎದುರಿಸಲಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ವಿಶೇಷವಾಗಿ ಒಂದೇ ಕೇಂದ್ರದಲ್ಲಿ ತಾಯಿ-ಮಗ (Mother and son) ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಸಗರ ಗ್ರಾಮದ ಗಂಗಮ್ಮ ಹಾಗೂ ಮಗ ಮಲ್ಲಿಕಾರ್ಜುನ ಇಬ್ಬರು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.
ತಾಯಿ-ಮಗ ಶಹಾಪುರ ತಾಲೂಕಿನ ಸಗರ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಅಪರೂಪ ಎನ್ನುವಂತ ಪ್ರಕರಣ ಇದಾಗಿದ್ದು, ತಾಯಿ-ಮಗ ಇಬ್ಬರು ಉತ್ಸಾಹದಿಂದಲೇ ಪರೀಕ್ಷೆ ಬರೆಯಲು ಬಂದಿದ್ದರು.
ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ
ಪರೀಕ್ಷಾ ಭಯವನ್ನು ದೂರ ಮಾಡುವ ದೃಷ್ಟಿಯಿಂದ ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗರ ಕೋರಲಾಗಿತ್ತು. ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಶುಭ ಹಾರೈಕೆ ಕೋರಲಾಗಿತ್ತು. ಸ್ಥಳೀಯರು ರೆಡ್ ಕಾರ್ಪೆಟ್ ಮೂಲಕ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸ್ವಾಗತಿಸಿದರು.
ನಗರದ ಕೆ.ಇ. ಬೋರ್ಡ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಚಾಕೊಲೇಟ್ ಮತ್ತು ಪೆನ್ ನೀಡಲಾಯಿತು. ಜತೆಗೆ ಆತ್ಮಸ್ಥೈರ್ಯ ತುಂಬುವ ಘೋಷಣಾ ಫಲಕ ಹಿಡಿದು ವಿದ್ಯಾರ್ಥಿಗಳಿಗೆ ಧೈರ್ಯದಿಂದ ಬರೆಯಿರಿ ಎಂದು ಹಿರಿಯ ನಾಗರಿಕರು ಪ್ರೇರೆಪಿಸಿದರು.
ಏಪ್ರಿಲ್ 6ಕ್ಕೆ ಪರೀಕ್ಷೆ ಮುಕ್ತಾಯ
ಇಂದಿನಿಂದ (ಮಾರ್ಚ್ 25) ರಾಜ್ಯಾದ್ಯಂತ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 (SSLC Exam) ಆರಂಭವಾಗಿದೆ. ಒಟ್ಟು 2750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (Karnataka School Examination and Evaluation Board) ತಿಳಿಸಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆಯನ್ನು (Police Security) ಒದಗಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೆಲವು ವಸ್ತುಗಳಿಗೆ ನಿಷೇಧವನ್ನು ಹೇರಲಾಗಿದೆ.
ಜಾಗೃತ ದಳದ ಅಧಿಕಾರಿಗಳ ನೇಮಕ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪರೀಕ್ಷೆ ಬರೆಯುತ್ತಿರುವ ಬಾಲಕರೆಷ್ಟು? ಬಾಲಕಿಯರೆಷ್ಟು?
2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ರಾಜ್ಯಾದ್ಯಂತ 4,41,910 ಬಾಲಕರು ಹಾಗೂ 4,28,058 ಬಾಲಕಿಯರು ಸೇರಿ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.
ಸಿಸಿ ಕ್ಯಾಮರಾ ಅಳವಡಿಕೆ
5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ ಸೇರಿ ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವ್ಯವಹಾರಗಳ ಬಗ್ಗೆ ನಿಗಾವಹಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿರ್ದೇಶಕರು ಮತ್ತು ಸಹನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಡಯಟ್ ಪ್ರಾಂಶುಪಾಲರನ್ನು ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಡಯಟ್ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ
25-03-2024: ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ)
27-03-2024: ಸಮಾಜ ವಿಜ್ಞಾನ (ಕೋರ್ ಸಬ್ಜೆಕ್ಟ್)
30-03-2024: ವಿಜ್ಞಾನ, ರಾಜ್ಯಶಾಸ್ತ್ರ
02-04-2024: ಗಣಿತ, ಸಮಾಜ ಶಾಸ್ತ್ರ
03-04-2024: ಅರ್ಥಶಾಸ್ತ್ರ
04-04-2024: ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)
06-04-2024: ದ್ವಿತೀಯ ಭಾಷೆ ಪರೀಕ್ಷೆ (ಇಂಗ್ಲಿಷ್, ಕನ್ನಡ)
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ