ಬೆಂಗಳೂರು: ಸಮುದಾಯಗಳ ನಡುವೆ ದ್ವೇಷ ಸೃಷ್ಟಿ ಆರೋಪದಲ್ಲಿ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಕುಮಾರ್ ಅಹಿಂಸಾಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಕೇಂದ್ರ ಗೃಹ ಇಲಾಖೆ ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಮಾನ್ಯತೆ ರದ್ದು ಪಡಿಸಿದ್ದ ಹಿನ್ನೆಲೆಯಲ್ಲಿ ನಟ ಚೇತನ್ (Chetan Kumar Ahimsa), ಭಾರತದಿಂದ ಗಡಿಪಾರಾಗುವ ಭೀತಿಯಲ್ಲಿದ್ದರು. ಆದರೆ, ಜೂ.20 ರವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಸ್ತರಿಸಿರುವುದರಿಂದ ಅವರು ಕೊಂಚ ನಿರಾಳರಾಗುವಂತಾಗಿದೆ.
2018ರಲ್ಲಿ ನಟ ಚೇತನ್‌ಗೆ ಭಾರತದ ಸಾಗರೋತ್ತರ ಪೌರತ್ವ ಕಾರ್ಡ್ ನೀಡಲಾಗಿತ್ತು. ಆದರೆ ಇತ್ತೀಚೆಗೆ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ಭಾರತ ವಿರೋಧಿ ಚಟುವಟಿಕೆ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ನಟ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಕಾರಣ ಕೇಂದ್ರ ಗೃಹ ಇಲಾಖೆ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ನಟ ಚೇತನ್ ಪ್ರಶ್ನಿಸಿದ್ದರು.
ಏ.21 ರಂದು ನಟ ಚೇತನ್‌ಗೆ ಹೈಕೋರ್ಟ್ ಷರತ್ತುಬದ್ಧ ರಕ್ಷಣೆ ನೀಡಿತ್ತು. ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವೀಟ್ ಮಾಡುವಂತಿಲ್ಲ, ಬಾಕಿಯಿರುವ ಕೇಸ್‌ಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲವೆಂದು ಷರತ್ತು ಹೇರಲಾಗಿತ್ತು. ಅದರಂತೆ ನಟ ಟ್ವೀಟ್ ಡಿಲೀಟ್ ಮಾಡಿರುವುದಾಗಿ ವಕೀಲರು ಶುಕ್ರವಾರ ಹೇಳಿದ್ದಾರೆ. ಹೀಗಾಗಿ ಜೂ.20 ರವರೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ್ದು, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Pralhad Joshi: ಕೋಮುವಾದಿಗಳನ್ನು ಜಾತ್ಯತೀತರೆಂದು ಬಿಂಬಿಸಬೇಡಿ: ರಾಹುಲ್ ಗಾಂಧಿ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
ಏನಿದು ವಿವಾದ?
ಕೇಂದ್ರ ಸರ್ಕಾರ 2018ರಲ್ಲಿ ನಟ ಚೇತನ್ ಅವರಿಗೆ ಸಾಗರೋತ್ತರ ಭಾರತೀಯ ಪ್ರಜೆ ಕಾರ್ಡ್ ನೀಡಿತ್ತು. ಸಮುದಾಯಗಳ ವಿರುದ್ಧ ದ್ವೇಷ, ಸಾಮರಸ್ಯ ಕದಡುವಿಕೆ, ಕೋವಿಡ್ ನಿಯಮಾವಳಿಗಳ ಉಲ್ಲಂಘನೆ, ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯದ ವಲಸೆ ಬ್ಯೂರೋ, ನಟ ಚೇತನ್ ಅವರಿಗೆ ಈ ಹಿಂದೆ ಶೋಕಾಸ್ ನೋಟಿಸ್ ನೀಡಿತ್ತು. 1955ರ ಪೌರತ್ವ ಕಾಯಿದೆಯ ಸೆಕ್ಷನ್ 7 ಡಿ(ಬಿ) ಮತ್ತು 7ಡಿ (ಇ) ಅಡಿ ಕಾರ್ಡ್ ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿತ್ತು. ನೋಟಿಸ್‌ಗೆ ನಟ ಚೇತನ್ ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕಾರ್ಡ್ ಅನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ನಟ ಚೇತನ್ ಹೈಕೋರ್ಟ್ ಮೆಟ್ಟಿಲೇರಿದ್ದರು.