ಬೆಂಗಳೂರು: ನೌಕರರ ವೇತನ ಪರಿಷ್ಕರಣೆ ಮಾಡುವಂತೆ ಕೆಎಸ್ಆರ್‌ಟಿಸಿಯ (KSRTC) ನಾಲ್ಕು ನಿಗಮಗಳು ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವೇತನ ಪರಿಷ್ಕರಣೆ ಸಂಬಂಧ ಸಭೆ ನಡೆಸಿ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ನಾಲ್ಕು ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಸಬೇಕಾಗಿದೆ. ಆದರೆ. 2022ರ ಡಿಸೆಂಬರ್‌ಗೆ ನಾಲ್ಕು ವರ್ಷಗಳ ಅವಧಿ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆ ಮಾಡಲು ಕೆಎಸ್ಆರ್‌ಟಿಸಿ ನಿಗಮಕ್ಕೆ ಸೂಚಿಸುವಂತೆ ಕೆಎಸ್ಆರ್‌ಟಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಯದೇವ್ ಎಂ ಹಾಗೂ ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾ. ಸೂರಜ್ ಗೋವಿಂದರಾಜು ಅವರ ಪೀಠ, ನೌಕರರ ವೇತನ ಪರಿಷ್ಕರಣೆ ಮಾಡುವಂತೆ ಕೆಎಸ್ಆರ್‌ಟಿಸಿಯ ನಾಲ್ಕು ನಿಗಮಗಳ (ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ(ಎನ್‌ಇಕೆಆರ್‌ಟಿಸಿ), ಬಿಎಂಟಿಸಿ) ಎಂಡಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನೌಕರರ ವೇತನ ಪರಿಷ್ಕರಣೆ ಮಾಡಲು ಸೂಚಿಸಿದೆ.
ಕೆಎಸ್ಆರ್‌ಟಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ಶಿವರಾಜು ಎಚ್.ಬಿ. ವಾದ ಮಂಡಿಸಿದ್ದಾರೆ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನ್ಯಾಯಪೀಠ ಕಾಲಾವಕಾಶ ನೀಡಿದೆ.