Site icon Vistara News

Ram Mandir: ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಎಚ್‌.ಡಿ.ದೇವೇಗೌಡರ ಕುಟುಂಬ

HD Devegowda family in ayodhya

ಅಯೋಧ್ಯೆ: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠರಾದ ಎಚ್.ಡಿ.ದೇವೇಗೌಡರು ಅವರ ಧರ್ಮಪತ್ನಿ ಚನ್ನಮ್ಮ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರೊಂದಿಗೆ ಅಯೋಧ್ಯೆಯಲ್ಲಿ ನಡೆದ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಸೋಮವಾರ ಭಾಗಿಯಾಗಿದ್ದರು. ಅತಿ ಗಣ್ಯರ ಗ್ಯಾಲರಿಯಲ್ಲಿ ಆಸೀನರಾಗಿದ್ದ ಮಾಜಿ ಪ್ರಧಾನಿಗಳ ಕುಟುಂಬಸ್ಥರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಾಗೂ ಭವ್ಯ ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಂಡರು.

ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರ ಗಣ್ಯರಿಗೆ ಶುಭ ಕೋರಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಧನ್ಯವಾದ ಹೇಳಿದರು. ಇದಕ್ಕೆ ಪ್ರತಿಯಾಗಿ ದೇವೇಗೌಡರು, ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಅಭಿವಂದನೆ ಸಲ್ಲಿಸಿದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮ ಮಂದಿರ ಭವ್ಯ, ದಿವ್ಯ ಭಾರತಕ್ಕೆ ಮುನ್ನುಡಿಯಾಗಲಿ

ಇದೇ ವೇಳೆ ರಾಜ್ಯದಿಂದ ಅಯೋಧ್ಯೆಗೆ ತೆರಳಿದ್ದ ಗಣ್ಯರು, ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಗಣ್ಯಾತಿಗಣ್ಯರು ಮಾಜಿ ಪ್ರಧಾನಿಗಳು ಆಸೀನರಾಗಿದ್ದ ಜಾಗಕ್ಕೆ ಬಂದು ಕುಶಲೋಪರಿ ವಿಚಾರಿಸಿದರು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಅವರು ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳ ಕುಟುಂಬದೊಂದಿಗೆ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರು ಇದ್ದರು.

ಅಯೋಧ್ಯೆಯಲ್ಲಿಯೇ ನಿಖಿಲ್‌ ಹುಟ್ಟುಹಬ್ಬ ಆಚರಣೆ

ನಿಖಿಲ್‌ ಕುಮಾರಸ್ವಾಮಿ ಅವರು ಅಯೋಧ್ಯೆಯಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಳಗ್ಗೆಯೇ ತಾವು ತಂಗಿದ್ದ ಹೋಟೆಲ್‌ನಲ್ಲಿಯೇ ಜನ್ಮದಿನ ಆಚರಿಸಿಕೊಂಡ ಅವರು, ತಾತ ದೇವೇಗೌಡರು, ಅಜ್ಜಿಯವರಾದ ಚನ್ನಮ್ಮ ಹಾಗೂ ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದುಕೊಂಡರು. ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ನನ್ನ ಜನ್ಮದಿನ ಬಂದಿದ್ದು, ಅದೂ ಅಯೋಧ್ಯೆಯ ರಾಮ ಸನ್ನಿಧಿಯಲ್ಲೇ ಆಚರಿಸಿಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಸುಕೃತವೇ ಸರಿ ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಹೇಳಿದ್ದಾರೆ.

Exit mobile version