Site icon Vistara News

Vistara News Launch | ನಿರ್ಧಾರ ತಿಳಿಸದೆ ನೈಜ ಸುದ್ದಿಗಳು ಬಿತ್ತರವಾಗಲಿ: ಡಾ.ಕೆ. ಸುಧಾಕರ್‌

Vistara News Launch

ಬೆಂಗಳೂರು: ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಕೆಲ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸುವಾಗ ಅವರ ನಿರ್ಧಾರದಂತೆಯೇ ತಿಳಿಸುತ್ತವೆ. ಆದರೆ, ಯಾವುದೇ ವಿಷಯದಲ್ಲಿ ನಿರ್ಧಾರ ತಿಳಿಸದೇ ನೈಜತೆಯನ್ನು ಮಾತ್ರವೇ ತಿಳಿಸಬೇಕಾಗುತ್ತದೆ. ನೈಜ ಸುದ್ದಿಗಳನ್ನು ಯಥಾವತ್ತಾಗಿ ಪ್ರಸಾರ ಮಾಡಿದಾಗ ಜನರು ಇಷ್ಟಪಡುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಸ್ತಾರ ನ್ಯೂಸ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಸ್ತಾರ ಸುದ್ದಿವಾಹಿನಿಯು ಇಂದು ರಾಜ್ಯದ ಮನೆಮನೆಗೆ ತಲುಪಿದೆ. ನಾಳೆಯಿಂದ ರಾಜ್ಯ ಜನರ ಮನಸ್ಸುಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ. ನೈಜ ಮತ್ತು ಹೊಸತನದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಮಾಧ್ಯಮ ಮಾದರಿಯಾಗಿ ಕೆಲಸ ಮಾಡಬೇಕು. ಅಂತಹ ಕೆಲಸವನ್ನು ವಿಸ್ತಾರ ಮಾಡಲಿದೆ ಎಂದು ನಂಬಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | Vistara News Launch | ಮೌಲ್ಯ ಬಿತ್ತುವ ಕೆಲಸ ಮಾಧ್ಯಮಗಳಿಂದಾಗಲಿ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ರಾಜ್ಯದಲ್ಲಿ ಅನೇಕ ಮಾಧ್ಯಮಗಳಿವೆ. ವೀಕ್ಷಕರಿಗೆ ಒಂದು ಬಟನ್‌ ಒತ್ತಿದರೆ ಯಾವುದು ಬೇಕೋ ಅಂತಹ ಚಾನೆಲ್‌ ನೋಡುವ ಸ್ವಾತಂತ್ರ್ಯವಿದೆ. ಮತ್ತೆ ಮತ್ತೆ ಒಂದೇ ಚಾನೆಲ್‌ ಅನ್ನು ನೋಡಲು ಜನರ ಮನಸ್ಸನ್ನು ಗೆಲ್ಲುವಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಕಾಗುತ್ತದೆ ಎಂದರು.

ವಿಸ್ತಾರ ನ್ಯೂಸ್‌ ಚಾನೆಲ್‌ ಹಿಂದೆ ಇರುವ ಹರಿಪ್ರಕಾಶ್‌ ಕೋಣೆಮನೆ ಅವರನ್ನು ನಾನು ಬಹಳ ವರ್ಷಗಳಿಂದ ಕಂಡಿದ್ದೇನೆ. ಅವರು ಯಾವುದೋ ಒಂದು ಉದ್ಯಮವನ್ನು ಮಾಡಲು ಚಾನೆಲ್‌ ಆರಂಭಿಸಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯಕ್ಕೆ ಒಂದು ರೀತಿಯ ಹೊಸತನ ನೀಡಲು ಹೃದಯಾಂತರಾಳದ ಬದ್ಧತೆ ಹಾಗೂ ಅಪೇಕ್ಷೆಯಿಂದ ವಿಸ್ತಾರವನ್ನು ಆರಂಭಿಸಿದ್ದಾರೆ ಎಂದು ಹೇಳಿದರು.

ಹರಿಪ್ರಕಾಶ್‌ ಕೋಣೆಮನೆ ಅವರ ಇಚ್ಛಾಶಕ್ತಿಗೆ ಸಮಾನವಾದ ಇಚ್ಛೆ, ಬದ್ಧತೆಯಿಂದ ಕೋಲಾರದ ಎಚ್‌.ವಿ.ಧರ್ಮೇಶ್‌ ಹಾಗೂ‌ ಶಿರಸಿಯ ಶ್ರೀನಿವಾಸ್ ಹೆಬ್ಬಾರ್‌ ಅವರು ಆರ್ಥಿಕ ಸಹಕಾರ ನೀಡಿರುವ ಹಿನ್ನೆಲೆಯಲ್ಲಿ ಒಳ್ಳೆಯ ತಂಡ ರಚನೆಯಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಇವರು ಯಶಸ್ಸು ಗಳಿಸಲಿ‌ ಎಂದು ಶುಭ ಹಾರೈಸಿದರು.

ಇದನ್ನೂ ಓದಿ | Vistara news launch | ವಿಸ್ತಾರ ನ್ಯೂಸ್‌ ನಂ.1 ಚಾನೆಲ್‌ ಆಗಲಿ: ಮಾಜಿ ಸಿಎಂ ಡಿ.ವಿ ಸದಾನಂದ ಗೌಡ

Exit mobile version