ಯಾದಗಿರಿ/ಹಾಸನ: ರಾಜ್ಯದಲ್ಲಿ ದಿನೇದಿನೇ ತಾಪಮಾನ ಹೆಚ್ಚಳ ಆಗುತ್ತಿರುವುದರಿಂದ ಶಾಖಾಘಾತ ಪ್ರಕರಣಗಳೂ ಏರುತ್ತಿವೆ. ಕನಕಪುರ ತಾಲೂಕಿನಲ್ಲಿ ಶಾಖದ ಹೊಡೆತಕ್ಕೆ ಎರಡು ಕಾಡಾನೆಗಳು ಮೃತಪಟ್ಟ ಬೆನ್ನಲ್ಲೇ ಬಿಸಿಲಿಗೆ ಎತ್ತು ಬಲಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ನಡೆದಿದೆ. ಮತ್ತೊಂದೆಡೆ ಹಾಸನದ ಸಕಲೇಶಪುರದ ಬಳಿ ಬಿಸಿಲ ತಾಪಕ್ಕೆ ತೆಂಗಿನ ಮರದಲ್ಲೇ ಯುವಕನೊಬ್ಬ ಪ್ರಜ್ಞೆತಪ್ಪಿ ನೇತಾಡಿರುವುದು ಕಂಡುಬಂದಿದೆ.
ಅತಿಯಾದ ಬಿಸಿಲಿಗೆ ಪ್ರಾಣಬಿಟ್ಟ ಎತ್ತು
ಅತಿಯಾದ ಬಿಸಿಲಿಗೆ ಎತ್ತು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಲ್ಲಿಕಾರ್ಜುನ ಎಂಬುವವರ ಎತ್ತು ಮೃತಪಟ್ಟಿದ್ದು, ಎತ್ತು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಜಮೀನಿಗೆ ಹೋಗಿ ವಾಪಸ್ ಬರುವಾಗ ಅತಿಯಾದ ಬಿಸಿಲಿಗೆ ಎತ್ತು ಪ್ರಾಣ ಬಿಟ್ಟಿದೆ. ಇದರಿಂದ ರೈತನಿಗೆ 60 ಸಾವಿರ ರೂ. ನಷ್ಟವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಗ್ರಾಮಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜ್ಞೆತಪ್ಪಿ ಮರದಲ್ಲೇ ನೇತಾಡಿದ ಯುವಕ
ಹೆಚ್ಚಿನ ಬಿಸಿಲ ತಾಪಕ್ಕೆ ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿ ಯುವಕ ನೇತಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿಯಲ್ಲಿ ನಡೆದಿದೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ರಕ್ಷಣೆ ಮಾಡಿದ್ದರಿಂದ ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನವೀನ್ (21) ಸಾವಿನ ದವಡೆಯಿಂದ ಪಾರಾದ ಯುವಕ. ಗ್ರಾಮದ ಮಂಜು ಎಂಬುವವರ ತೆಂಗಿನಮರದ ಗರಿಗಳನ್ನು ಕತ್ತರಿಸಲು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನವೀನ್ ಮರವೇರಿದ್ದ. ತೆಂಗಿನ ಗರಿಗಳನ್ನು ಕತ್ತರಿಸಿ ಕೆಳಗೆ ಇಳಿಯುತ್ತಿದ್ದಾಗ ಬಿಸಿಲಿನ ತಾಪಕ್ಕೆ ಪ್ರಜ್ಞಾಹೀನನಾಗಿ ತೆಂಗಿನ ಮರದಲ್ಲೇ ನೇತಾಡಿದ್ದಾನೆ. ಸುಮಾರು 50 ಅಡಿ ಎತ್ತರದಲ್ಲಿ 45 ನಿಮಿಷಗಳ ಕಾಲ ಪ್ರಜ್ಞೆ ತಪ್ಪಿ ತೆಂಗಿನ ಮರದಲ್ಲೇ ಯುವಕ ಸಿಲುಕಿಕೊಂಡಿದ್ದ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಯುವಕನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ | Elephants Death: ಉರಿ ಬಿಸಿಲು ತಾಳಲಾರದೆ, ನೀರು ಸಿಗದೆ ನಿತ್ರಾಣಗೊಂಡಿದ್ದ ಕಾಡಾನೆಗಳ ಸಾವು
ಘನ ತಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ
ರಾಯಚೂರು: ಬಿಸಿಲಿನ ತಾಪಕ್ಕೆ ರಾಯಚೂರಿನ ಯಕ್ಲಾಸಪುರ ಬಳಿಯ ಘನ ತಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ತ್ಯಾಜ್ಯ ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.