ಮಂಗಳೂರು: ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ(Rain News) ಶುಕ್ರವಾರ ರಾತ್ರಿಯಿಂದ ಮತ್ತೆ ಆರ್ಭಟ ತೋರಿದ್ದು, ರಾಜ್ಯದ ವಿವಿಧೆಡೆ ಶನಿವಾರವೂ ಭಾರಿ ಮಳೆ ಮುಂದುವರಿದಿದೆ. ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮಂಗಳೂರಿನಲ್ಲಿ ಸತತವಾಗಿ ಭಾರಿ ಮಳೆ ಸುರಿದಿದ್ದರಿಂದ ಪಾಂಡೇಶ್ವರ- ಶಿವನಗರ, ಬಿಜೈ, ಸುಭಾಷ್ ನಗರ ಸೇರಿ ಹಲವಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರ, ಉಳ್ಳಾಲ, ಮುಲ್ಕಿ ಮತ್ತು ಮೂಡುಬಿದಿರೆ ವ್ಯಾಪ್ತಿಯ ಮಂಗಳೂರು ಕಂದಾಯ ಉಪ ವಿಭಾಗದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದ.ಕ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಶನಿವಾರ ರಜೆ ಘೋಷಿಸಿದ್ದರು.
ಶಿವನಗರದ ಅನೇಕ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಜನರು ತಮ್ಮ ಮನೆಗಳಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ. ಪಂಪ್‌ವೆಲ್ ಸರ್ಕಲ್, ಕೊಟ್ಟಾರ ಜಂಕ್ಷನ್, ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗ ನೀರು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಶಿರಸಿಯಲ್ಲಿ ರಸ್ತೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಶಿರಸಿ ನಗರದಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಶಿರಸಿ ನಗರದ ರಸ್ತೆಗಳೆಲ್ಲೆಲ್ಲಾ ನೀರು ತುಂಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಹುಬ್ಬಳ್ಳಿ ರಸ್ತೆ, ಯಲ್ಲಾಪುರ ರಸ್ತೆ, ಝೂ ವೃತ್ತ, ಅಗಸೇಬಾಗಿಲು , ಬನವಾಸಿ ರಸ್ತೆ ಸೇರಿ ಬಹುತೇಕ ಎಲ್ಲಾ ರಸ್ತೆಗಳ ಮೇಲೂ ನೀರು ತುಂಬಿ ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಅಶ್ವಿನಿ ಸರ್ಕಲ್ ಬಳಿ ರಸ್ತೆಯ ಮೇಲೆ ಭಾರಿ ಪ್ರಮಾಣದಲ್ಲಿ ನೀರು ತುಂಬಿ ಕೊಂಡು ಕೆಲಕಾಲ ರಸ್ತೆ ಸಂಚಾರಕ್ಕೆ ಭಾರಿ ತೊಡಕುಂಟಾಯಿತು. ರಸ್ತೆಯ ಪಕ್ಕದಲ್ಲಿರುವ ಗಟಾರಗಳು ತುಂಬಿ ಅಲ್ಲಿಂದ ಬರುವ ಕೊಳಚೆ ನೀರು ಸಹ ರಸ್ತೆಯ ಮೇಲೆಯೆ ಬರುವಂತಾಗಿತ್ತು.
ವಿಜಯಪುರದಲ್ಲಿ ತುಂಬಿ ಹರಿದ ಹಳ್ಳ-ಕೊಳ್ಳಗಳು
ವಿಜಯಪುರ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ಕೆಲವೆಡೆ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಹಚ್ಯಾಳ ಹಳ್ಳ ಮಳೆಗೆ ತುಂಬಿ ಹರಿದಿದೆ. ಹಳ್ಳದ ನೀರಿನಿಂದ ಶಿವಶರಣ ಎಂಬುವವರ ಜಮೀನಿನ ಒಡ್ಡು ಒಡೆದು ಕಬ್ಬು ಹಾಗೂ ಹತ್ತಿ ಬೆಳೆ ಜಲಾವೃತವಾಗಿದೆ. ನಾಲ್ಕು ಎಕರೆ ಜಮೀನಿನಲ್ಲಿನ ಕಬ್ಬಿನ ಬೆಳೆ ಜಲಾವೃತವಾಗಿದ್ದು ಮಳೆ ಗಾಳಿಗೆ ಕಬ್ಬು ನೆಲ ಕಚ್ಚಿದೆ. ಇನ್ನು ಎರಡು ಎಕರೆ ಜಮೀನಿನಲ್ಲಿನ ಹತ್ತಿ ಬೆಳೆಯೂ ನೀರಲ್ಲಿ ನಿಂತಿದೆ. ಹಳ್ಳದ ನೀರು ಕಬ್ಬು ಹಾಗೂ ಹತ್ತಿ ಬೆಳೆಯನ್ನು ಹಾಳು ಮಾಡಿದೆ ಎಂದು ರೈತ ಶಿವಶರಣ ಕಂಗಾಲಾಗಿದ್ದಾರೆ.
ಯಾದಗಿರಿಯಲ್ಲಿ ಸೇತುವೆ ಜಲಾವೃತ
ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರಭಾಗದಲ್ಲಿರುವ ಹೆಡಗಿಮದ್ರಾ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ. ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಜನರು ಊರಿಗೆ ತೆರಳಲು ಪರದಾಡುವಂತಾಗಿದೆ. ನಂತರ ನೀರಿನ ಹರಿವು ಕಡಿಮೆಯಾದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ವಿದ್ಯಾರ್ಥಿಗಳು ಹರಿಯುವ ನೀರಿನಲ್ಲಿಯೇ ಸೇತುವೆ ಮೂಲಕ ಶಾಲೆ ಹಾಗೂ ಕಾಲೇಜಿಗೆ ತೆರಳಿದರು. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಸುಮಾರು 2 ಗಂಟೆ ಕಾಲ ಎಡೆಬಿಡದೆ ಮಳೆ ಸುರಿದಿದ್ದರಿಂದ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಜಿಲ್ಲೆಯ ಚಿತಾಪೂರ, ಚಿಂಚೋಳಿ, ಹಾಗೂ ಜೇವರ್ಗಿ ತಾಲೂಕಿನಲ್ಲೂ ಮಳೆಯ ಆರ್ಭಟ ಜೋರಾಗಿದೆ.
ಶಿವಮೊಗ್ಗದಲ್ಲಿ ಮನೆಗಳಿಗೆ ನುಗ್ಗಿದ ನೀರು
ಶಿವಮೊಗ್ಗದಲ್ಲಿ ಬೆಳಂಬೆಳಗ್ಗೆ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ಚರಂಡಿಗಳ ನೀರು ಮನೆಗಳಿಗೆ ನುಗ್ಗಿವೆ.
ಇದನ್ನೂ ಓದಿ | ಮಂಗಳೂರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಭಾರಿ ಮಳೆ, ತಗ್ಗುಪ್ರದೇಶ ಜಲಾವೃತ