ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆ ಭಾರಿ ಮಳೆಯಾಗಿದ್ದರಿಂದ ರಸ್ತೆಗಳು ಜಲಾವೃತವಾಗಿ, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ವಾಹನ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದ ಮೂರು ದಿನಗಳಿಂದ ಸಂಜೆ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಗುಡುಗು, ಮಿಂಚು ಸಹಿತ ಸುರಿಯುತ್ತಿರುವ ಮಳೆಗೆ ಯಶವಂತಪುರ, ಪೀಣ್ಯ, ಮಹಾಲಕ್ಷ್ಮಿ ಲೇಔಟ್, ಗೊರಗುಂಟೆಪಾಳ್ಯ, ಎಂಜಿ ರೋಡ್, ಕಾರ್ಪೋರೇಷನ್ ಸರ್ಕಲ್, ಕೋರಮಂಗಲ ಹಲಸೂರು, ಎಚ್‌ಎಸ್ಆರ್ ಲೇಔಟ್, ಶಿವಾಜಿನಗರ ವ್ಯಾಪ್ತಿಯಲ್ಲಿ ರಸ್ತೆಗಳು ಜಲಾವೃತವಾಗಿದ್ದರಿಂದ ಬೈಕ್ ಸವಾರರು, ಸಾರ್ವಜನಿಕರು ಬಸ್ ನಿಲ್ದಾಣ, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳ ಕೆಳಗೆ ಆಶ್ರಯ ಪಡೆದರು.
ಇದನ್ನೂ ಓದಿ Rain news | ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ
ರಸ್ತೆಗಳಲ್ಲಿ ಅಪಾರ ಪ್ರಮಾಣ ನೀರು ನಿಂತಿದ್ದರಿಂದ ಯಾವುದು ರಸ್ತೆ, ಯಾವುದೇ ಗುಂಡಿ ಎಂಬುವುದು ಗೊತ್ತಾಗದೆ ವಾಹನ ಸವಾರರು ಪರದಾಡಿದರು. ಯಶವಂತಪುರ ಮತ್ತು ಸರ್ಕಲ್ ಮಾರಮ್ಮ ದೇವಸ್ಥಾನ ನಡುವಿನ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಇನ್ನು ಇಂದಿರಾನಗರದ ಲೋವರ್ ಅರಮ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ಜಲಾವೃತವಾಗಿ, ದ್ವಿಚಕ್ರ ವಾಹನ ಹಾಗೂ ಆಟೋ ಸವಾರರು ಪರದಾಡಿದರು.
ಗಂಗಮ್ಮ ಲೇಔಟ್ ಸಂಪೂರ್ಣ ಜಲಾವೃತ
ಹೆಬ್ಬಾಳದ ಗಂಗಮ್ಮ ಲೇಔಟ್ ಸಂಪೂರ್ಣವಾಗಿ ಜಲಾವೃತವಾಗಿದೆ. ಪ್ರತಿ ವರ್ಷ ಭಾರಿ ಮಳೆಯಾದಾಗ ಈ ವಾರ್ಡ್ ಮುಳುಗಡೆಯಾಗುತ್ತದೆ. ಎಷ್ಟೇ ಬಾರಿ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಈಗಾಗಲೇ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯ ಸಾಮಗ್ರಿ ನೀರುಪಾಲಾಗಿ, ಬಡಾವಣೆ ನಿವಾಸಿಗಳು ನಿದ್ದೆಯಿಲ್ಲದೆ ಪರದಾಡುವಂತಾಯಿತು.
ಇದನ್ನೂ ಓದಿ | Weather Report | ರಾಜ್ಯಾದ್ಯಂತ ಭಾರಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್